ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಮ್ರೋಹ ಲೋಕಸಭಾ ಕ್ಷೇತ್ರದ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಶನಿವಾರ ಅಮಾನತುಗೊಳಿಸಿದೆ. ಪಕ್ಷದ ನೀತಿಗಳು, ಸಿದ್ಧಾಂತ ಮತ್ತು ಶಿಸ್ತಿನ ವಿರುದ್ಧ ಹೇಳಿಕೆ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಇದರ ಹೊರತಾಗಿಯೂ ನಿರಂತರವಾಗಿ ಪಕ್ಷದ ವಿರುದ್ಧವಾಗಿಯೇ ವರ್ತಿಸುತ್ತಿದ್ದಾರೆ ಎಂದು ಬಿಎಸ್‌ಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚೆಗಷ್ಟೇ ಡ್ಯಾನಿಶ್ ಅಲಿ ಅವರನ್ನು ಬಿಜೆಪಿ ಸಂಸದ ರಮೇಶ್ ಬಿಧೂರಿ ವಿವಾದಾತ್ಮಕವಾಗಿ ನಿಂದಿಸಿದ್ದರು. ಇದು ಸಾಕಷ್ಟು ವಿವಾದ ಹಾಗೂ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಮಾತನಾಡಿದ್ದ ಡ್ಯಾನಿಶ್ ಅಲಿ, ಲೋಕಸಭೆಯಲ್ಲಿ ತಮ್ಮ ಮೇಲೆ ಮೌಖಿಕವಾಗಿ ದಾಳಿ ಮಾಡಲಾಗಿದ್ದು, ಸದನದ ಹೊರಗೂ ತಮ್ಮ ಮೇಲೆ ದಾಳಿಯನ್ನು ಸಕ್ರಿಯಗೊಳಿಸುವ ಪ್ರಯತ್ನ ನಡೆಯಬಹುದು ಎಂದು ಹೇಳಿದ್ದರು. ಇದೀಗ ಬಿಎಸ್‌ಪಿ ಪಕ್ಷವು ಅವರನ್ನು ಅಮಾನತುಗೊಳಿಸಿದೆ. ಮತ್ತೊಂದೆಡೆ, ಸಂಸದ ಡ್ಯಾನಿಶ್ ಅಲಿ, ತಮ್ಮ ವಿರುದ್ಧ ಪಕ್ಷ ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ
ನಾನು ಬಿಎಸ್‌ಪಿ ಪಕ್ಷವನ್ನು ಬಲಪಡಿಸಲು ಶ್ರದ್ಧೆಯಿಂದ ಪ್ರಯತ್ನಿಸಿದ್ದೇನೆ. ಯಾವುದೇ ರೀತಿಯ ಪಕ್ಷ ವಿರೋಧಿ ಕೆಲಸ ಮಾಡಿಲ್ಲ, ಇದಕ್ಕೆ ನನ್ನ ಅಮ್ರೋಹ ಕ್ಷೇತ್ರದ ಜನರೇ ಸಾಕ್ಷಿಯಾಗಿದ್ದಾರೆ. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ನಾನು ಖಂಡಿತವಾಗಿ ವಿರೋಧಿಸಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ. ಈ ರೀತಿ ಮಾಡುವುದೇ ಅಪರಾಧವಾದರೆ, ಅದಕ್ಕೆ ಯಾವುದೇ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧ ಎಂದು ಡ್ಯಾನಿಶ್ ಅಲಿ ತಿಳಿಸಿದ್ದಾರೆ. ಇದೇ ವೇಳೆ, ತಮ್ಮ ವಿರುದ್ಧ ಪಕ್ಷದ ಕ್ರಮವು ದುರದೃಷ್ಟಕರ ಎಂದು ಒತ್ತಿ ಹೇಳಿದ ಅವರು, ಲೋಕಸಭೆ ಚುನಾವಣೆಯಲ್ಲಿ ತಮಗೆ ಪಕ್ಷದ ಟಿಕೆಟ್ ನೀಡಿದ್ದಕ್ಕಾಗಿ ನಾಯಕಿ ಮಾಯಾವತಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.