ಲಖನೌ (ಉತ್ತರ ಪ್ರದೇಶ): ಲಖಿಂಪುರ ಹಿಂಸಾಚಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಸಂಸದರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹಿಂಸಾಚಾರ ನಡೆದ ಲಖಿಂಪುರ ಖೇರಿಗೆ ತೆರಳಿ ಸರಿಯಾದ ಮಾಹಿತಿ ಪಡೆಯಲು ಸಾಧ್ಯವಾಗದಂತೆ ನಿನ್ನೆ ರಾತ್ರಿಯಿಂದ ರಾಜ್ಯಸಭಾ ಸಂಸದ ಎಸ್.ಸಿ.ಮಿಶ್ರಾ ಅವರಿಗೆ ಲಖನೌದಲ್ಲಿ ಗೃಹಬಂಧನ ವಿಧಿಸಲಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಈ ಪ್ರಕರಣಲ್ಲಿ ಉತ್ತರ ಪ್ರದೇಶ ಬಿಜೆಪಿ ನಾಯಕರ ಕೈವಾಡವಿದ್ದು ಸರ್ಕಾರಿ ಸಂಸ್ಥೆಯ ತನಿಖೆಯಿಂದ ಸಂತ್ರಸ್ತರಿಗೆ ನ್ಯಾಯ ದೊರೆಯುವ ಸಾಧ್ಯತೆ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವುದು ಅನುಮಾನ ಮೂಡಿಸುತ್ತದೆ. ಹೀಗಾಗಿ ಹಲವರ ಪ್ರಾಣಹಾನಿಗೆ ಕಾರಣವಾದ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಬಿಎಸ್ಪಿ ಒತ್ತಾಯಿಸಿದೆ.
ಘಟನೆ ಸಂಬಂಧ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ಬಿಡುಗಡೆ ಮಾಡಿದ್ದು, ಮೃತಪಟ್ಟ ನಾಲ್ವರು ರೈತರಲ್ಲಿ ಓರ್ವನನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇನ್ನುಳಿದ ನಾಲ್ಕು ಮಂದಿ ಅವರ ಬೆಂಗಾವಲು ಕಾರುಗಳಿಗೆ ಸಿಕ್ಕು ಬಲಿಯಾಗಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ:ಲಖಿಂಪುರ ಖೇರಿಗೆ ತೆರಳುತ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಬಂಧನ- ಕಾಂಗ್ರೆಸ್ ಆರೋಪ