ನವದೆಹಲಿ: ಬಿಎಎಸ್ಪಿ ಮುಖ್ಯಸ್ಥೆ ಮಾಯಾವತಿ ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ. ಇಂದು ಬೆಳಗ್ಗೆ ನಡೆದ ಪಕ್ಷದ ಪದಾಧಿಕಾರಿಗಳ ಪ್ರಮುಖ ಸಭೆಯ ನಂತರ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಮಾಯಾವತಿ ಘೋಷಿಸಿದರು. ಮಾಯಾವತಿಯ ನಂತರ ಸೋದರಳಿಯ ಆಕಾಶ್ ಆನಂದ್ ಪಕ್ಷದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಆದರೆ ಸದ್ಯಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರೇ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.
ಆಕಾಶ್ ಆನಂದ್ ಯಾರು, ಪಕ್ಷದಲ್ಲಿ ಅವರು ಈ ಮುನ್ನ ಯಾವೆಲ್ಲ ಜವಾಬ್ದಾರಿ ನಿಭಾಯಿಸಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ಆಕಾಶ್ ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ ಮತ್ತು ಇತ್ತೀಚೆಗೆ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯ ಉಸ್ತುವಾರಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಮಧ್ಯಪ್ರದೇಶ, ಛತ್ತೀಸಗಢ ಮತ್ತು ತೆಲಂಗಾಣದಲ್ಲಿ ಬಿಎಸ್ಪಿ ಪ್ರಚಾರಕ್ಕಾಗಿ ಕೆಲಸ ಮಾಡಿದ್ದಾರೆ. ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು, ಒಬಿಸಿ ಮತ್ತು ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ಒಳಗೊಂಡ ಪಕ್ಷದ ಚುನಾವಣಾ ಪ್ರಚಾರವನ್ನು ಸಿದ್ಧಪಡಿಸಲು ಮಾಯಾವತಿ ಅವರನ್ನು ನಿಯೋಗದ ಭಾಗವಾಗಿ ನೇಮಿಸಿದ್ದರು.
ಆಕಾಶ್ ಆನಂದ್ 2017 ರಲ್ಲಿ ತಮ್ಮ 22 ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಲಂಡನ್ನಲ್ಲಿ ಎಂಬಿಎ ಪದವಿ ಪಡೆದಿರುವ ಅವರು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾಯಾವತಿ ಅವರೊಂದಿಗೆ ಪಾಲ್ಗೊಳ್ಳುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಈ ಸಮಯದಲ್ಲಿ ಅವರು ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.