ಶ್ರೀನಗರ(ಜಮ್ಮು-ಕಾಶ್ಮೀರ): ಮುಂದಿನ ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ನಿಯೋಜನೆಗೊಳಿಸುವ ಅಗತ್ಯವೇ ಬೀಳುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀನಗರದ ಮೌಲಾನಾ ಆಜಾದ್ ಮೈದಾನದಲ್ಲಿ ರವಿವಾರ ಸಿಆರ್ಪಿಎಫ್ನ 83ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಪರೇಡ್ನ ಪರಿವೀಕ್ಷಣೆ ಮಾಡಿ ಮಾತನಾಡಿದ ಅವರು, ಕಾಶ್ಮೀರ ಮತ್ತು ಈಶಾನ್ಯ ಭಾಗ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಸಿಆರ್ಪಿಎಫ್ ಸಂಕಲ್ಪ ಮಾಡಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಈ ಮೂರು ಪ್ರದೇಶಗಳಲ್ಲಿ ಶಾಂತಿಯ ವಾತಾವರಣ ನೆಲೆಸಲಿದ್ದು, ಸಿಆರ್ಪಿಎಫ್ ಅಗತ್ಯ ಇರುವುದಿಲ್ಲ ಎಂದು ಅವರು ಹೇಳಿದರು.
ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್ ಪೀಡಿತ... ಹೀಗೆ ಮೂರು ಭಾಗಗಳಲ್ಲಿ ಸಂಪೂರ್ಣವಾದ ಶಾಂತಿ ಸ್ಥಾಪನೆಯಾದರೆ, ಅದರ ಸಂಪೂರ್ಣ ಹೆಗ್ಗಳಿಕೆಯೂ ಸಿಆರ್ಪಿಎಫ್ಗೆ ಸಲ್ಲುತ್ತದೆ ಎಂದು ಗೃಹಸಚಿವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಜಮ್ಮು-ಕಾಶ್ಮೀರದಲ್ಲಿ 370 ಪರಿಚ್ಛೇದ ರದ್ದುಗೊಳಿಸಿದ ಬಳಿಕ ಭಯೋತ್ಪಾದನೆಯ ಮೇಲೆ ನಿರ್ಣಾಯಕ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.