ನವದೆಹಲಿ: ದೇಶದಲ್ಲಿನ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದೆ ಎಂಬ ವರದಿಗಳ ಮಧ್ಯೆ ಮಂಗಳವಾರದಂದು 201.066 ಗಿಗಾವ್ಯಾಟ್‌ನಷ್ಟು ಭಾರತದಾದ್ಯಂತ ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಕಳೆದ ವರ್ಷ ದೇಶದಾದ್ಯಂತ 200.539 ಗಿಗಾವ್ಯಾಟ್ ವಿದ್ಯುತ್ ಪೂರೈಸಿದ್ದು, ಗರಿಷ್ಠ ಬೇಡಿಕೆ ಮೀರಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯು ದೇಶದ ಆರ್ಥಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿದ್ಯುತ್ ಸಚಿವಾಲಯ ಹೇಳಿದೆ.
ಈ ವರ್ಷದ ಮಾರ್ಚ್‌ನಲ್ಲಿ ಇಂಧನ ಬೇಡಿಕೆಯ ಬೆಳವಣಿಗೆಯು ಸುಮಾರು ಶೇ.8.9 ರಷ್ಟಿದೆ. ಇದಲ್ಲದೇ, ಬೇಡಿಕೆಯು ಮೇ - ಜೂನ್ ತಿಂಗಳುಗಳಲ್ಲಿ ಸುಮಾರು 215-220 GW ತಲುಪುವ ನಿರೀಕ್ಷೆಯಿದೆ. ಸರ್ಕಾರ ಮತ್ತು ಇತರ ಮಧ್ಯಸ್ಥಗಾರರು ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತಿವೆ. ವಿವಿಧ ಸಂಪನ್ಮೂಲಗಳ ಉತ್ತಮ ಬಳಕೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿದ್ಯುತ್ ಸಚಿವಾಲಯ ಹೇಳಿದೆ.
ಓದಿ:ಮೊದಲ ಬಾರಿಗೆ ಅತ್ಯಧಿಕ ಕಲ್ಲಿದ್ದಲು ಕೊರತೆ : ದೇಶಕ್ಕೆ ವಿದ್ಯುತ್ ಬಿಕ್ಕಟ್ಟು
ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತು ಚರ್ಚಿಸಲು ಕೇಂದ್ರ ವಿದ್ಯುತ್ ಸಚಿವ ಆರ್‌ಕೆ ಸಿಂಗ್ ಸೋಮವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದರು. ಅಡೆತಡೆಯಿಲ್ಲದ ವಿದ್ಯುತ್ ಸರಬರಾಜಿಗೆ ಕೈಜೋಡಿಸುವಂತೆ ಕೇಂದ್ರ ಮತ್ತು ರಾಜ್ಯ ಮಟ್ಟದ ಎಲ್ಲ ಪಾಲುದಾರರನ್ನು ಸಿಂಗ್ ಒತ್ತಾಯಿಸಿದ್ದಾರೆ ಎಂದು ವಿದ್ಯುತ್ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕಲ್ಲಿದ್ದಲು ಪೂರೈಕೆಯಲ್ಲಿನ ಲಾಜಿಸ್ಟಿಕ್ ನಿರ್ಬಂಧಗಳನ್ನು ಎದುರಿಸಲು ರೈಲ್ವೆ ಸಚಿವಾಲಯದ ಯೋಜನೆಯಡಿ ಸರಕು ಸಾಗಣೆ ರೇಕ್‌ಗಳನ್ನು (ಬೋಗಿಗಳು) ಹೊಂದಲು ಪವರ್ ಜೆನ್‌ಕೋಸ್‌ಗೆ ಸಚಿವರು ಒತ್ತಾಯಿಸಿದ್ದರು. ಕಲ್ಲಿದ್ದಲು ಮತ್ತು ವಿದ್ಯುತ್ ಪಿಎಸ್‌ಯುಗಳು ಮತ್ತು ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಿಸಲು ಹೆಚ್ಚುವರಿ ರೇಕ್‌ಗಳನ್ನು ನಿಯೋಜಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಸೋಮವಾರ ಹೇಳಿತ್ತು.
ಓದಿ:ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್.. ಪವರ್ ಕಟ್ನಿಂದ ಕಂಗಾಲಾದ ಧೋನಿ ಪತ್ನಿ!
ವಿದ್ಯುತ್ ಸ್ಥಾವರಗಳಾದ್ಯಂತ ಕಲ್ಲಿದ್ದಲಿನ ತ್ವರಿತ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೆಚ್ಚುವರಿ ರೈಲುಗಳು ಹಾಗೂ ರೇಕ್‌ಗಳನ್ನು ಭಾರತೀಯ ರೈಲ್ವೇ ತನ್ನ ಜಾಲದ ಮೂಲಕ ಕಲ್ಲಿದ್ದಲಿನ ಸಾಗಣೆಯನ್ನು ಹೆಚ್ಚಿಸಲು ಪ್ರಾರಂಭಿಸಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ. ಭಾರತೀಯ ರೈಲ್ವೇ ಕಲ್ಲಿದ್ದಲು ಸಾಗಣೆಯನ್ನು ಹೆಚ್ಚಿಸಿದೆ. ಇದರ ಪರಿಣಾಮ ಸೆಪ್ಟೆಂಬರ್ 2021 ಮತ್ತು ಮಾರ್ಚ್ 2022ರ ನಡುವೆ ಕಲ್ಲಿದ್ದಲು ಸರಕು ಸಾಗಣೆಯಲ್ಲಿ ಶೇಕಡಾ 32 ರಷ್ಟು ಹೆಚ್ಚು ಲೋಡ್ ಸರಬರಾಜಾಗಿದೆ. ಏಪ್ರಿಲ್ 2022 ರ ನಂತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸಜ್ಜುಗೊಳಿಸುವ ಮೂಲಕ ಶೇಕಡಾ 10 ರಷ್ಟು ಸರಕು ಸಾಗಣೆಯಲ್ಲಿ ಹೆಚ್ಚಳವಾಗಿದೆ ಎಂದು ಸಚಿವಾಲಯ ತಿಳಿಸಿದೆ.