ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅನೇಕ ಆ್ಯಪ್ಗಳು, ವೆಬ್ಸೈಟ್ಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಈ ಡಿಜಿಟಲ್ ವೇದಿಕೆ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಂಪರ್ಕ ಸಾಧ್ಯವಿದೆ. ಅದರಲ್ಲೂ, ಯುವಕ-ಯುವತಿಯರು ತಮ್ಮ ಸಂಗಾತಿಯ ಆಯ್ಕೆಗಾಗಿ ಮ್ಯಾಟ್ರಿಮೋನಿಯಲ್ ಸೈಟ್ಗಳ ಮೊರೆ ಹೋಗುತ್ತಿದ್ದಾರೆ. ಹೀಗೆ ಎಲ್ಲಿದ್ದವರೋ ಪರಿಚಯಕ್ಕೆ ಬಂದು ಮದುವೆಯ ನಿಶ್ಚಯಗಳು ಆಗುತ್ತಿವೆ. ಆದರೆ, ಕೆಲವರು ಮದುವೆಗೆ ಮುಂಚೆಯೇ ದೈಹಿಕ ಸಂಪರ್ಕಕ್ಕೆ ಬೇಡಿಕೆಯಿಟ್ಟು ಯುವತಿಯರನ್ನು ಮೋಸಗೊಳಿಸುತ್ತಿರುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇವೆ.
ಡಿಜಿಟಲ್ ವೇದಿಕೆ ಮುಖಾಂತರ ಸಂಪರ್ಕಕ್ಕೆ ಬಂದು ಮದುವೆಗೂ ಒಪ್ಪಿಕೊಂಡವರು ಮದುವೆಗೆ ಮುನ್ನ ದೈಹಿಕ ಸುಖವನ್ನು ಬಯಸುತ್ತಾರೆ. ಒಂದು ವೇಳೆ ಯುವತಿ ಇದಕ್ಕೆ ಒಪ್ಪದೇ ಹೋದಾಗ ನಿಜ ಬಣ್ಣ ಬಯಲಿಗೆ ಬರುತ್ತದೆ. ಕೆಲವೊಮ್ಮೆ ಯುವತಿ ಒಪ್ಪಿಗೆ ನೀಡಿದರೂ ಇಬ್ಬರೂ ಒಟ್ಟಿಗಿರುವ ಫೋಟೋ, ವಿಡಿಯೋಗಳನ್ನೇ ಮುಂದಿಟ್ಟುಕೊಂಡು ಬೆದರಿಕೆ, ಮಾನಸಿಕ ಹಿಂಸೆ ಕೊಡುವ ಪ್ರಕರಣಗಳು ವರದಿಯಾಗುತ್ತಿವೆ.
ಹೇಗೆ ವಂಚಿಸಲಾಗುತ್ತದೆ?: ಮದುವೆ ನಿಗದಿಯಾದ ಬಳಿಕ ಬೆಂಗಳೂರು, ಮುಂಬೈ, ಗೋವಾ, ಹೈದ್ರಾಬಾದ್... ಹೀಗೆ ಬೇರೆ-ಬೇರೆ ಪ್ರದೇಶಗಳ ರೆಸಾರ್ಟ್ಗಳಿಗೆ ಯುವತಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗುತ್ತಾರೆ. ಹಾಗೆ ಹೋದಾಗ ಲೈಂಗಿಕ ತೃಪ್ತಿಗೆ ಬೇಡಿಕೆ ಇಡಲಾಗುತ್ತದೆ. ಯುವತಿ ಒಪ್ಪದೇ ಇದ್ದಾಗ ಒತ್ತಾಯ ಮಾಡಲಾಗುತ್ತದೆ ಎಂಬುವುದು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಂದ ಗೊತ್ತಾಗುತ್ತದೆ.
ಹೈದರಾಬಾದ್‌ನ ಸಿಕಂದ್ರಾಬಾದ್ನ ಸಾಫ್ಟ್ವೇರ್ ಇಂಜಿನಿಯರ್ ಯುವತಿಗೆ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಕೆಲಸ ಮಾಡುವ ಯುವಕನಿಂದ ಮದುವೆ ಪ್ರಸ್ತಾಪ ಬಂದಿತ್ತು. ಕೋವಿಡ್ ಕಾರಣಕ್ಕೆ ಆತ ಒಂದು ವರ್ಷದಿಂದ ಹೈದ್ರಾಬಾದ್ನಲ್ಲಿ ನೆಲೆಸಿದ್ದ. ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯಕ್ಕೆ ಬಂದಿದ್ದ ಇಬ್ಬರೂ ಇದೇ ಮೇ ಅಥವಾ ಜೂನ್ನಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು. ಅಂತೆಯೇ, ಯುವತಿಗೆ ಕರೆ ಮಾಡಿದ ಯುವಕ, ಇಬ್ಬರು ಪರಸ್ಪರ ತಿಳಿದುಕೊಳ್ಳಲು ರೆಸಾರ್ಟ್ ಹೋಗೋಣ ಎಂದು ಕರೆದುಕೊಂಡು ಹೋಗಿದ್ದ. ಆದರೆ, ಅಲ್ಲಿಗೆ ಹೋದ ಮೇಲೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ. ಹೀಗಾಗಿ ಅಲ್ಲಿಂದ ಓಡಿ ಬಂದ ಯುವತಿ ಮದುವೆಯನ್ನೇ ರದ್ದು ಮಾಡಿದ್ದಾಳೆ ಎನ್ನುತ್ತಾರೆ ಎಸ್ಪಿ ಸಂಧ್ಯಾ.
ಅದೇ ರೀತಿಯಾಗಿ ಇಲ್ಲಿನ ಆಸ್ಪತ್ರೆಯೊಂದಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ವಿಜಯವಾಡದ ಯುವಕನ ಪರಿಚಯವಾಗಿ, ವಿವಾಹ ನಿಶ್ಚಯವೂ ಆಗಿತ್ತು. ಆ ಯುವಕ ಆಗಾಗ್ಗೆ ಹೈದ್ರಾಬಾದ್ಗೆ ಬಂದು ಯುವತಿಯನ್ನು ಭೇಟಿ ಮಾಡಿ, ಸಿನಿಮಾ, ರೆಸ್ಟೋರೆಂಟ್ಗೆಂದು ಕರೆದುಕೊಂಡು ಹೋಗುತ್ತಿದ್ದ. ಆದರೆ, ಕೆಲ ದಿನಗಳ ಬಳಿಕ ಆಕೆ ಆ ಯುವಕ ಸುಮ್ಮನೆ ಹೀಗೆ ಬರುವುದೆಲ್ಲ ಸರಿಯಲ್ಲ ಎಂದು ತಂದೆ-ತಾಯಿಯ ಬಳಿ ಹೇಳಿಕೊಂಡಿದ್ದಳು. ನಂತರ ವಿವಾಹವನ್ನು ರದ್ದು ಮಾಡಿದ್ದಾರೆ. ಆದರೆ, ಯುವಕ ತನ್ನ ಮೊಬೈಲ್ನಲ್ಲಿ ಇಬ್ಬರು ಸುತ್ತಾಡಿದ ಫೋಟೋಗಳಿವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದು, ಇದರಿಂದ ಭಯಗೊಂಡ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪೊಲೀಸರ ಸಲಹೆ ಏನು?: ಡಿಜಿಟಲ್ ವೇದಿಕೆಗಳ ಮೂಲಕ ಪರಿಚಯವಾಗಿ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. ಮದುವೆಗೆ ಮುಂಚೆಯೇ ಇಬ್ಬರೇ ಹೊರಗಡೆ ಹೋಗೋಣ. ಜತೆಯಾಗಿ ಇರೋಣ ಅಂತ ಯುವಕರು ಒತ್ತಾಯಿಸಿದರೆ, ಯುವತಿಯರು ಯಾವುದೇ ಕಾರಣಕ್ಕೂ ಒಪ್ಪಕೂಡದು. ಏಕಾಂತದ ಹೆಸರಲ್ಲಿ ಕೆಲ ಯುವಕರು ದಾರುಣವಾಗಿ ನಡೆದುಕೊಳ್ಳುತ್ತಾರೆ. ಆದ್ದರಿಂದ ಯುವತಿಯರು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು ಎಂಬುವುದು ಪೊಲೀಸರ ಪ್ರಮುಖ ಸಲಹೆ.
ಇದನ್ನೂ ಓದಿ:ಮತಾಂತರಕ್ಕೆ ವಿರೋಧಿಸಿದ ಹಿಂದೂ ಯುವತಿಯ ದಾರುಣ ಹತ್ಯೆ: ಪಾಕ್‌ನ ಸಿಂಧ್‌ನಲ್ಲಿ ಮುಂದುವರೆದ ದೌರ್ಜನ್ಯ