ಮಥುರಾ (ಉತ್ತರ ಪ್ರದೇಶ): ಸರ್ಕಾರಿ ಕಚೇರಿಗೆ ಅಲೆದು ಚಪ್ಪಲಿ ಸವೆದಿವೆ ಎಂಬ ಮಾತಿದೆ. ಆದರೆ, ಉತ್ತರ ಪ್ರದೇಶದ ಮಥುರಾದಲ್ಲಿ ರೈತರೊಬ್ಬರು ಕಚೇರಿಗೆ ಅಲೆದು ಚಪ್ಪಲಿ ಸವೆಸಿದ್ದಲ್ಲದೇ, ತಾನು ಪ್ರತಿಬಾರಿ ಅಲೆದಾಗ ಕೊಟ್ಟ ದೂರಿನ ಕಾಗದಗಳ ಮೂಟೆಯನ್ನೂ ಸಂಗ್ರಹಿಸಿದ್ದಾರೆ. ಇದುವರೆಗೆ ದೂರು ಕೊಟ್ಟ ಕಾಗದದ ಪತ್ರಿಗಳು ತೂಕ ಬರೋಬ್ಬರಿ 12 ಕೆಜಿಯಷ್ಟಾಗಿದೆ ಅಂತೆ.
ಹೌದು, ಜಮೀನಿನ ವಿವಾದ ವಿಚಾರವಾಗಿ ಢಾಕು ಬಿಬಾವಲಿ ಗ್ರಾಮದ ಚರಣ್ ಸಿಂಗ್ ಎಂಬ ರೈತ ಸತತ ಆರು ವರ್ಷಗಳಿಂದಲೂ ಸರ್ಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. ತನಗೆ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳ ಸುತ್ತ ತಿರುಗುತ್ತಿದ್ದಾರೆ. ಆದರೂ, ಅಧಿಕಾರಿಗಳು ರೈತನ ಸಮಸ್ಯೆ ಕಡೆ ಗಮನ ಹರಿಸಿಲ್ಲ. ಜೊತೆಗೆ ಪ್ರತಿ ಬಾರಿಯೂ ಕಚೇರಿಗೆ ತೆರಳಿದಾಗ ಮನವಿ ಪತ್ರ ಹಾಗೂ ದೂರು ಸಲ್ಲಿಸಿ ಬರುತ್ತಿದ್ದಾರೆ. ಪ್ರತಿ ಬಾರಿಯೂ ಆ ಮೂಟೆಯನ್ನು ಹೊತ್ತುಕೊಂಡೇ ಇಂದಿಗೂ ಕಚೇರಿಗೆ ರೈತ ಅಲೆಯುತ್ತಿದ್ದಾರೆ.
ರೈತನ ದೂರೇನು?: ರೈತ ಚರಣ್ ಸಿಂಗ್ ಅವರ ದೂರುಗಳು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿವೆ. ಗ್ರಾಮದ ಮುಖ್ಯಸ್ಥರು ಮತ್ತು ಗ್ರಾಮ ಕಾರ್ಯದರ್ಶಿ ಶಾಮೀಲಾಗಿ ತಮ್ಮ ಜಮೀನನ್ನು ಕಬಳಿಸಲು ಬಯಸುತ್ತಿದ್ದಾರೆ ಎಂದು ಚರಣ್ ಸಿಂಗ್ ಆರೋಪಿಸಿದ್ದಾರೆ.
ಸರ್ಕಾರಿ ಕಚೇರಿಗೆ 6 ವರ್ಷಗಳಿಂದ ರೈತನ ಅಲೆದಾಟ... 211 ಬಾರಿ ದೂರು ಸಲ್ಲಿಕೆ, ಕಾಗದ ಪತ್ರಿಗಳ ತೂಕವೇ 12 ಕೆಜಿ ಅಲ್ಲದೇ, ತಮ್ಮ ಪೂರ್ವಿಕರ ಮನೆಯನ್ನೂ ಕಬಳಿಸುವ ಹುನ್ನಾರ ಮಾಡಲಾಗಿದೆ ಎಂದೂ ರೈತ ದೂರುತ್ತಾರೆ. ಸುಮಾರು 50 ವರ್ಷಗಳಿಂದ ವಾಸಿಸುತ್ತಿರುವ ಅವರ ಮನೆಯ ಜಾಗ ಕೂಡ ಗ್ರಾಮ ಸಭೆಗೆ ಸೇರಿದೆ ಎಂದು ಗ್ರಾಮ ಕಾರ್ಯದರ್ಶಿ ಹೇಳುತ್ತಿದ್ದಾರೆ. ಈ ಬಗ್ಗೆ ಆರು ವರ್ಷ ಹಿಂದೆ ಮೊದಲ ಬಾರಿಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದೆ. ಅಲ್ಲಿಂದ ನಿರಂತರವಾಗಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ಸಲ್ಲಿಸುತ್ತಲೇ ಇರುವೆ ಎನ್ನುತ್ತಾರೆ ಚರಣ್ ಸಿಂಗ್.
ಇದುವರೆಗೆ 211 ಬಾರಿ ದೂರು ಸಲ್ಲಿಕೆ: ಈ ಮೊದಲು ದೂರು ನೀಡಿದಾಗ ಜಮೀನಿನ ಅಳತೆ ಮಾಡಲಾಗಿತ್ತು. ಆದರೆ, ಹೊಲವನ್ನು ತಪ್ಪಾಗಿ ಅಳತೆ ಮಾಡಿ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶ ಪಡಿಸಲಾಗಿತ್ತು ಎಂದು ರೈತ ಬೇಸರ ವ್ಯಕ್ತಪಡಿಸಿದರು. ಅಲ್ಲದೇ, ನ್ಯಾಯಕ್ಕಾಗಿ ಆರು ವರ್ಷಗಳಿಂದ ನಿರಂತರವಾಗಿ ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಬಳಿಗೆ ಅಲೆಯುತ್ತಲೇ ಇದ್ದೇನೆ. ಇದುವರೆಗೆ 211 ಬಾರಿ ದೂರು ಸಲ್ಲಿಕೆ ಮಾಡಿದ್ದೇನೆ ಎಂದು ಅಲವತ್ತುಕೊಂಡರು.
ಸರ್ಕಾರಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಭೇಟಿ ಮಾಡಿದ ಪ್ರತಿ ಬಾರಿಯೂ ಹೊಸದಾಗಿ ದೂರು, ಮನವಿ ಪತ್ರಗಳನ್ನು ಸಲ್ಲಿಸುತ್ತಲೇ ಇದ್ದೇನೆ. ಹೀಗೆ ಕೊಟ್ಟ ದೂರಿನ ಕಾಗದ ಪತ್ರಗಳ ತೂಕ ಇಲ್ಲಿಯವರೆಗೆ 12 ಕೆಜಿಯಷ್ಟು ಆಗಿದೆ. ಈ ಮೂಟೆ ಹೊತ್ತುಕೊಂಡೇ ಪ್ರತಿ ಬಾರಿ ಕಚೇರಿ ಅಲೆಯುತ್ತಿದ್ದೇನೆ. ಆದರೂ, ಅಧಿಕಾರಿಗಳು ನನ್ನ ಸಮಸ್ಯೆಯ ಗಮನ ಕೊಡುತ್ತಿಲ್ಲ ಎಂದು ಆಕ್ರೋಶ ಹೊರಹಾಕುವ ಚರಣ್ ಸಿಂಗ್, ತಮಗೆ ನ್ಯಾಯದ ಭರವಸೆಯನ್ನೂ ಮಾತ್ರ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ:ಸಾಲ ಮರುಪಾವತಿಗೆ ಕಿತ್ತಾಟ: ಕೋಪದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ