ತೇಜ್‌ಪುರ(ಅರುಣಾಚಲ ಪ್ರದೇಶ):ಅರುಣಾಚಲ ಪ್ರದೇಶದಲ್ಲಿ ವರ್ಷಧಾರೆ ಬೋರ್ಗರೆಯುತ್ತಿದೆ. ಇದು ಪ್ರವಾಹ ಸೃಷ್ಟಿಸಿದ್ದಲ್ಲದೇ, ಭಾರೀ ಭೂ ಕುಸಿತಕ್ಕೂ ಕಾರಣವಾಗಿದೆ. ಪಶ್ಚಿಮ ಕಮೆಂಗ್ ಜಿಲ್ಲೆಯ ತಿಪ್ಪಿ ಜಲಪಾತ ಪ್ರದೇಶದಲ್ಲಿ ಶನಿವಾರ ಸಂಜೆ ಭೂಕುಸಿತ ಸಂಭವಿಸಿದ್ದು ಹಲವು ವಾಹನಗಳಿಗೆ ಹಾನಿಯಾಗಿದೆ. ಇನ್ನೂ ಕೆಲವು ನೀರಿನಲ್ಲಿ ಕೊಚ್ಚಿ ಹೋಗಿವೆ.
ಎರಡು ದಿನಗಳಿಂದ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವ ಕಾರಣ ತಿಪ್ಪಿ ಜಲಪಾತ ಬೋರ್ಗರೆಯುತ್ತಿದೆ. ಅಧಿಕ ನೀರಿನಿಂದಾಗಿ ಭೂಕುಸಿತ ಉಂಟಾಗಿದೆ. ಇದರ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮಳೆ ನಿಲ್ಲದ ಕಾರಣ ಭೂಕುಸಿತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಆ ಮಾರ್ಗವಾಗಿ ಸಂಚರಿಸದಂತೆ ಅಲ್ಲಿನ ಆಡಳಿತ ಎಚ್ಚರಿಕೆ ನೀಡಿದೆ. ಪರ್ಯಾಯ ರಸ್ತೆಯನ್ನೂ ಬಳಸುವಂತೆಯೂ ಸೂಚಿಸಿದೆ.
ಅರುಣಾಚಲ ಪ್ರದೇಶದಲ್ಲಿ ಭೂಕುಸಿತ.. ಪ್ರವಾಹದಲ್ಲಿ ಕೊಚ್ಚಿ ಹೋದ ವಾಹನಗಳು ವಾಹನಗಳು ಕೊಚ್ಚಿ ಹೋಗಿ ಜಖಂ:ಇನ್ನು, ಮಳೆಯ ಆರ್ಭಟ ಎಷ್ಟಿದೆ ಎಂಬುದರ ವಿಡಿಯೋಗಳು ಹರಿದಾಡುತ್ತಿವೆ. ರಸ್ತೆಯ ಮೇಲೆ ನಿಲ್ಲಿಸಿದ್ದ ಖಾಲಿ ಟ್ಯಾಂಕರ್ ಮತ್ತು ವಾಹನವೊಂದು ಭೂಕುಸಿತಕ್ಕೆ ತುತ್ತಾಗಿ ಕೊಚ್ಚಿ ಹೋಗಿವೆ. ನದಿ ನೀರಿನಲ್ಲಿ ಟ್ಯಾಂಕರ್ವೊಂದು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ಮಾರುತಿ ಸುಜುಕಿ, ಆಲ್ಟೊ ಕಾರು, ಬೊಲೆರೊ ಪಿಕಪ್ ವ್ಯಾನ್ ಮತ್ತು ಖಾಲಿ ತೈಲ ಟ್ಯಾಂಕರ್ ಭೂಕುಸಿತ ಪ್ರದೇಶದಿಂದ ಕೊಚ್ಚಿ ಹೋಗಿ 10 ಕಿ.ಮೀ ದೂರದಲ್ಲಿ ಬಿದ್ದಿವೆ ಎಂದು ಪೊಲೀಸರು ತಿಳಿಸಿದರು. ಭೂಕುಸಿತ ಸಾಧ್ಯತೆ ಕಂಡು ವಾಹನಗಳನ್ನು ಜನರು ರಸ್ತೆ ಮೇಲೆಯೇ ಬಿಟ್ಟು ಪರಾರಿಯಾದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ವಾಹನಗಳ ಚಾಲಕರು, ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ:ವಿಜಯಪುರ: ಹೊಲಕ್ಕೆ ನೀರು ಹಾಯಿಸಲು ಹೋಗಿ ಇಬ್ಬರು ಸಹೋದರರ ಸಾವು