ಶ್ರೀನಗರ:ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬುಧವಾರ ಭಾರಿ ಭೂಕುಸಿತ ಸಂಭವಿಸಿದೆ. ಕೇಂದ್ರಾಡಳಿತ ಪ್ರದೇಶದ ಉಧಂಪುರ ಜಿಲ್ಲೆಯ ಸಂರೋಲಿ ಪ್ರದೇಶದಲ್ಲಿ ಈ ಭೂಕುಸಿತ ಸಂಭವಿಸಿದೆ. ತಕ್ಷಣಕ್ಕೆ ಈ ಹೆದ್ದಾರಿಯಲ್ಲಿ ಓಡಾಡವುದನ್ನು ನಿರ್ಬಂಧಿಸಲಾಗಿದೆ ಎಂದು ಉಧಂಪುರ ಸಂಚಾರ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಿಮತ್ ಸಿಂಗ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಭೀಕರ ಮಳೆ: ಭಾರಿ ಭೂಕುಸಿತದಿಂದ ಕಂಗಾಲಾದ ಕಣಿವೆ ಜನ - ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೂಕುಸಿತ
ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಜಮ್ಮು ಮತ್ತು ಕಾಶ್ಮೀರ ನಲುಗಿದೆ. ಭಾರಿ ಮಳೆ ಸುರಿಯುತ್ತಿದ್ದು, ಶ್ರೀನಗರದ ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿವೆ. ಝೀಲಂ ನದಿಯ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು ಹಲವೆಡೆ ಪ್ರವಾಹ ಉಂಟಾಗಿದೆ.
ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಸ್ಯಾಮ್ರೋಲಿಯ ದೇವಲ್ ಸೇತುವೆಯ ಬಳಿ ರಸ್ತೆಯ ಒಂದು ಭಾಗವೂ ಸಹ ಕೊಚ್ಚಿಹೋಗಿದೆ. ರಸ್ತೆಯ 80 ರಿಂದ 100 ಮೀಟರ್ ಕೊಚ್ಚಿಹೋಗಿದೆ. ಭೂಕುಸಿತ ಸಂಭವಿಸಿದಾಗ ಜೆಸಿಬಿ ಯಂತ್ರವೂ ಸಹ ನದಿಯಲ್ಲಿ ಬಿದ್ದಿದೆ. ಈ ರಸ್ತೆ ತೆರವು ಕಾರ್ಯಾಚರಣೆಗೆ ಕನಿಷ್ಠ ಎರಡು ದಿನಗಳಾದರೂ ಬೇಕು. ಹಾಗಾಗಿ ಎರಡು ದಿನಗಳ ಕಾಲ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡದಂತೆ ಪ್ರಯಾಣಿಕರಿಗೆ ಮನವಿ ಮಾಡುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.
ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಶ್ರೀನಗರದ ತಗ್ಗು ಪ್ರದೇಶಗಳೆಲ್ಲ ಇಂದು ಜಲಾವೃತವಾಗಿವೆ. ಝೀಲಂ ನದಿಯ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ಶ್ರೀನಗರ ಜಿಲ್ಲಾಡಳಿತವು ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು 24x7 ಸಹಾಯವಾಣಿ ಕೊಠಡಿಯನ್ನು ಸ್ಥಾಪಿಸಿದೆ.