ತ್ರಿಶೂರ್ (ಕೇರಳ):ದರೋಡೆಕೋರರ ಗುಂಪೊಂದು 3 ಕಿಲೋಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ಕೇರಳ ರಾಜ್ಯದ ತ್ರಿಶೂರಿನಲ್ಲಿ ನಡೆದಿದೆ. ಡಿಪಿ ಚೈನ್ ಎಂಬ ಸಂಸ್ಥೆ ತಯಾರಿಸಿದ ಚಿನ್ನಾಭರಣಗಳನ್ನು ತಮಿಳುನಾಡಿನ ಕನ್ಯಾಕುಮಾರಿಯ ವ್ಯಾಪಾರಿಯೊಬ್ಬರಿಗೆ ಕೊಡಲು ಎಂದು ಡಿಪಿ ಚೈನ್ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಆಭರಣಗಳೊಂದಿಗೆ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದರು.
ಈ ವೇಳೆ ಕಾರೊಂದರಲ್ಲಿ ಬಂದ ಅಪರಿಚಿತ ನಾಲ್ವರ ಗುಂಪು ಹಲ್ಲೆ ಮಾಡಿ ಚಿನ್ನವನ್ನು ದೋಚಿ ಪರಾರಿಯಾಗಿದೆ ಎಂದು ಉದ್ಯೋಗಿಗಳು ದೂರು ನೀಡಿದ್ದಾರೆ. ಬಿಳಿ ಬಣ್ಣದ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಬಂದ ಗುಂಪು ದರೋಡೆ ನಡೆಸಿದೆ ಎಂದು ದೂರಿನಲ್ಲಿ ಉದ್ಯೋಗಿಗಳು ಉಲ್ಲೇಖಿಸಿದ್ದಾರೆ. ಕಂಪನಿಯ ಉದ್ಯೋಗಿಗಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಡಿಪಿ ಚೈನ್ ಸಂಸ್ಥೆಯಲ್ಲಿ ತಯಾರಿಸಿದ ಆಭರಣಗಳನ್ನು ವಾರಕ್ಕೊಮ್ಮೆ ಚೆನ್ನೈ-ಎಗ್ಮೋರ್ ರೈಲಿನ ಮೂಲಕ ತ್ರಿಶೂರ್‌ನಿಂದ ವ್ಯಾಪಾರಿಗಳಿಗೆ ಆಭರಣಗಳನ್ನು ತಲುಪಿಸಲಾಗುತ್ತಿತ್ತು. ಈ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡ ದುಷ್ಕರ್ಮಿಗಳು ಈ ದರೋಡೆ ನಡೆಸಿದ್ದಾರೆ ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳುವಾದ ಚಿನ್ನಾಭರಣದ ಒಟ್ಟು ಮೌಲ್ಯ ಒಂದೂವರೆ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.