ಪಾಲ್ಘರ್ (ಮಹಾರಾಷ್ಟ್ರ) : ತಾರಾಪುರ ಎಂಐಡಿಸಿ ಘಟಕದಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಮೂರು ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಸಾಗಿದೆ. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಕೂಡಲೇ ಬೆಂಕಿಯನ್ನು ಹತೋಟಿಗೆ ತರದಿದ್ದರೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬೋಯಿಸರ್ನ ತಾರಾಪುರ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಪ್ರೀಮಿಯರ್ ಇಂಟರ್ಮೀಡಿಯರಿ ಕೆಮಿಕಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ರಭಸಕ್ಕೆ ಸ್ಥಳದಲ್ಲಿ ಹೊಗೆ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸತತ ಎಂಟು ದೊಡ್ಡ ಸ್ಫೋಟಗಳು ಸಂಭವಿಸಿವೆ. ಆದರೆ, ಬೆಂಕಿ ಅವಘಡಕ್ಕೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ.
ಓದಿ:ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಕಾರಿಗೆ ಬೆಂಕಿ ಇಟ್ಟ ಕಿಡಿಗೇಡಿ.. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ
ಪಾಲ್ಘರ್ ಜಿಲ್ಲೆಯ ತಾರಾಪುರ ಎಂಐಡಿಸಿಯಲ್ಲಿ ಬೆಂಕಿಯ ಘಟನೆಗಳು ಹೆಚ್ಚಾಗುತ್ತಿವೆ. ಎರಡು ತಿಂಗಳ ಹಿಂದೆಯೂ ಇಲ್ಲಿನ ಕೆಮಿಕಲ್ ಪ್ಲಾಂಟ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಅಸ್ತವ್ಯಸ್ತವಾಗಿತ್ತು. ಇತ್ತೀಚಿನ ಬೆಳವಣಿಗೆಯಲ್ಲಿ ಮಂಗಳವಾರ ರಾತ್ರಿ ಮತ್ತೊಂದು ಕೆಮಿಕಲ್ ಕಂಪನಿಗೆ ಬೆಂಕಿ ತಗುಲಿದೆ. ಬೆಂಕಿಯ ಸ್ವರೂಪ ಗಂಭೀರವಾಗಿದ್ದು ಅದನ್ನು ನಿಯಂತ್ರಿಸುವುದೇ ಅಗ್ನಿಶಾಮಕ ದಳಕ್ಕೆ ದೊಡ್ಡ ಸವಾಲಾಗಿದೆ.
ಸ್ಥಳೀಯ ಪುರಸಭೆ ಆಡಳಿತ, ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ. ಕಂಪನಿಯಲ್ಲಿ ದಹನಕಾರಿ ವಸ್ತುಗಳ ದೊಡ್ಡ ದಾಸ್ತಾನು ಇದ್ದ ಕಾರಣ ಬೆಂಕಿ ಉಲ್ಬಣಗೊಂಡಿದೆ ಎಂದು ಶಂಕಿಸಲಾಗಿದೆ.
ಕೆಮಿಕಲ್ ಕಂಪನಿ ಬೆಂಕಿಯಿಂದ ಭಾರೀ ಪ್ರಮಾಣದಲ್ಲಿ ಹೊಗೆ ಸುತ್ತಮುತ್ತ ನಗರಗಳಲ್ಲಿ ಸುತ್ತುವರಿದಿದೆ. ಇದರಿಂದ ಸ್ಥಳೀಯ ನಿವಾಸಿಗಳು ಉಸಿರಾಡಲು ಕಷ್ಟಪಡುತ್ತಿದ್ದಾರೆ. ರಾತ್ರಿಯಾಗಿರುವುದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮೂರು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ.
ಬೆಂಕಿಯಿಂದಾಗಿ ಕಂಪನಿಯಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ಇದರ ಪ್ರಬಲ ಕಂಪನದಿಂದಾಗಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಂಕಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.