ಜುನಾಗಢ (ಗುಜರಾತ್):ಸಾಂಪ್ರದಾಯಿಕ ಆಚರಣೆಗಳಿಗೆ ಸೆಡ್ಡು ಹೊಡೆದ ಒಂಭತ್ತು ಜೋಡಿಗಳು, ತಾಳಿ ಕಟ್ಟದೇ ಬೌದ್ಧ ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದರು. ಜುನಾಗಢದ ಸಮ್ಯಕ್ ಸೇವಾ ಸಮಿತಿಯ ಆಶ್ರಯದಲ್ಲಿ ಈ ಸಾಮೂಹಿಕ ವಿವಾಹ ನಡೆದಿದ್ದು, ನವದಂಪತಿಗಳು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧನ ಫೋಟೋಗಳನ್ನು ಹಿಡಿದು ಅಪರೂಪದ ಮದುವೆಗೆ ಸಾಕ್ಷಿಯಾದರು.
ನವದಂಪತಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸುವ ಮೂಲಕ ಪ್ರಮಾಣವಚನ ಮಾಡಿಸಲಾಯಿತು. ಪೀಠಿಕೆಯ ಮೇಲೆ ಕೈಯಿಟ್ಟ ಅವರು, ಮೇಲು-ಕೀಳು ಎಂಬ ಭೇದ-ಭಾವ ಮಾಡದೇ ತಾವು ತಮ್ಮ ಜೀವನದುದ್ದಕ್ಕೂ ಒಟ್ಟಿಗೆ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಬಳಿಕ ನವದಂಪತಿಗಳಿಗೆ ಅಲ್ಲಿದ್ದ ಸೇರಿದ್ದ ಜನರು ಹರಸಿದರು.
ಇದನ್ನೂ ಓದಿ:ಹಗರಣದಲ್ಲಿ ಶಿಕ್ಷಣ ಸಚಿವರು ಜೈಲು ಪಾಲಾಗಿದ್ದು ಇತಿಹಾಸದಲ್ಲೇ ಮೊದಲು: ಗೌತಮ್ ಗಂಭೀರ್ ಟೀಕೆ
ಮದುವೆ ಬಳಿಕ ಸಮ್ಯಕ್ ಸೇವಾ ಸಮಿತಿಯ ಆಡಳಿತಾಧಿಕಾರಿಗಳು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೇಲು-ಕೀಳು ಎಂಬ ಜಾತಿ, ಧರ್ಮ, ಬಿಂಬಿಸುವ ಯಾವುದೇ ಶಾಸ್ತ್ರಗಳಿಲ್ಲದೆ ವರ ಮತ್ತು ವಧು ಪರಸ್ಪರ ಒಪ್ಪಿಕೊಂಡು ಇಲ್ಲಿ ಮದುವೆಯಾಗಿದ್ದಾರೆ. ಈ ಬಾರಿ ಬುದ್ಧ ಸಮೂಹ ಲಗ್ನ ಸೇವಾ ಸಮಿತಿ ಮತ್ತು ಸಮ್ಯಕ್ ಸೇವಾ ಸಮಿತಿ ಜಂಟಿಯಾಗಿ ಈ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿತ್ತು. ಮದುವೆಯಲ್ಲಿ ಅಂಬೇಡ್ಕರ್ ಮತ್ತು ಬುದ್ಧನ ಫೋಟೋಗಳ ಹೊರತು ಇಲ್ಲಿ ಮಂತ್ರ ಪಠಣವಾಗಲಿ, ಮಂಗಳಸೂತ್ರವಾಗಲಿ ಯಾವುದಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಅಂತಹ ಯಾವುದೇ ಆಚರಣೆಗಳಿಗೆ ಆಸ್ಪದ ನೀಡದೇ ಒಂಭತ್ತು ಜೋಡಿಗಳು ಮದುವೆಯಾದರು ಎಂದರು.