ಅಹಮದಾಬಾದ್ (ಗುಜರಾತ್):ಅಹಮದಾಬಾದ್ ಜಿಲ್ಲೆಯ ಧೋಲ್ಕಾ ಪ್ರದೇಶದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ್ದರೇ, ತಾಯಿ ಹಾಗೂ ಮತ್ತೋರ್ವ ಮಗ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಕಿರಣ್ ರಾಥೋಡ್ (52), ಹರ್ಷ ರಾಥೋಡ್ ಸಾವನ್ನಪ್ಪಿದ್ದಾರೆ. ನಿತಾಬೆನ್ ಕಿರಣ್ ರಾಥೋಡ್ ಮತ್ತು ಹರ್ಷಿಲ್ ರಾಥೋಡ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ: ಕಿರಣ್ ರಾಥೋಡ್ ಮೂಲತಃ ಮೆಹಸಾನಾ ವಿಜಾಪುರದವರಾಗಿದ್ದು, ಪ್ರಸ್ತುತ ಢೋಲ್ಕಾದ ಸಮೀಪದ ಮಾಫ್ಲಿಪುರ ಗ್ರಾಮದ ರಾಮದೇವನಗರ ಸೊಸೈಟಿಯಲ್ಲಿ ಇವರು ಕುಟುಂಬ ನೆಲೆಸಿತ್ತು. ಕೆಲ ದಿನಗಳ ಹಿಂದಷ್ಟೇ ಕಿರಣ್ರ ಮಗಳು ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಕುಟುಂಬದ ವಿರೋಧದ ನಡುವೆಯೇ ವಿವಾಹವಾಗಿದ್ದಕ್ಕೆ ಕಿರಣ್ ಕುಟುಂಬ ಬೇಸರಗೊಂಡಿತ್ತು. ಮತ್ತೊಂದೆಡೆ, ಮಗಳ ಅತ್ತೆಯ ಕುಟುಂಬ, ಕಿರಣ್ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ನಿನ್ನೆ ಮಧ್ಯಾಹ್ನ ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳು ಒಟ್ಟಾಗಿ ವಿಷ ಸೇವಿಸಿದ್ದಾರೆ. ಪೊಲೀಸ್ ತನಿಖೆ ವೇಳೆ ಡೆತ್ನೋಟ್ ಪತ್ತೆಯಾಗಿದ್ದು, ಇದರಲ್ಲಿ ತಮ್ಮ ಮಗಳ ಅತ್ತಯ ವಿರುದ್ಧ ಆರೋಪ ಮಾಡಿರುವುದು ಬೆಳಕಿಗೆ ಬಂದಿದೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.