ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಮತ್ತು ಒಲಿಂಪಿಯನ್ ಬಾಕ್ಸರ್ ಮೇರಿ ಕೋಮ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ದಕ್ಷಿಣ ಏಷ್ಯಾದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಅಮೆರಿಕನ್ ಆಂಕೊಲಾಜಿ ಇನ್ಸ್ಟಿಟ್ಯೂಟ್ (AOI) ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ರೋಗದ ವಿರುದ್ಧ ಹೋರಾಡಲು ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಭಾರತದಲ್ಲಿ ವಾರ್ಷಿಕವಾಗಿ ಸುಮಾರು 1.5 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುವ ನಿರೀಕ್ಷೆಯಿದೆ. ಆದರೆ ಎನ್‌ಸಿಆರ್‌ಪಿ 2020 ವರದಿಯ ಪ್ರಕಾರ, ಕ್ಯಾನ್ಸರ್ ಕುರಿತಾದ ಆರಂಭಿಕ ತಪಾಸಣೆಯ ಅರಿವು ಜನರಲ್ಲಿ ಬಹಳ ಕಡಿಮೆಯಾಗಿದೆ. ಇದೇ ಕಾರಣದಿಂದ ಈ ಕಾಯಿಲೆ ರೋಗಿಯಲ್ಲಿ ಪತ್ತೆಯಾಗುವ ಸಂದರ್ಭದಲ್ಲಿ ರೋಗವು ಗುಣಪಡಿಸಲಾಗದ ಹಂತ ತಲುಪುತ್ತದೆ. ಇದರಿಂದ ರಾಷ್ಟ್ರದ ಹೆಚ್ಚಿನ ರೋಗಿಗಳು ಕೊನೆ ಹಂತಗಳಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ರೋಗಲಕ್ಷಣಗಳನ್ನು ಸಾಧ್ಯವಾದಷ್ಟು ಬೇಗ ಗುರುತಿಸಲು, ಅದರಿಂದ ಗುಣಮುಖವಾಗಲು ಆರಂಭಿಕ ಪತ್ತೆ ಬಹಳ ಮುಖ್ಯವಾಗಿದೆ.