ರಾಯ್‌ಪುರ:ಏಪ್ರಿಲ್ 3 ರಂದು ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಐದು ವರ್ಷದ ಮಗು ಮತ್ತು ಆತನ ಕುಟುಂಬವೀಗ ಕಂಗಾಲಾಗಿದೆ.
ಬಕವಾಂಡ್ ಬ್ಲಾಕ್‌ನ ಬನಿಯಾ ಗ್ರಾಮದ ಶ್ರವಣ್ ಕಶ್ಯಪ್ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಎಸ್‌ಟಿಎಫ್ ಯೋಧ ಕಶ್ಯಪ್ ಸಾವು ಇಡೀ ಕುಟುಂಬವನ್ನೇ ಕಣ್ಣೀರ ಕಡಲಲ್ಲಿ ತೇಲಿಸಿದೆ. ತಾಯಿ, ಪತ್ನಿ ಮತ್ತು 5 ವರ್ಷದ ಮಗ ತೀವ್ರ ಸಂಕಷ್ಟದಲ್ಲಿದ್ದಾರೆ. ಇವರ ಸಂಬಳದಲ್ಲೇ ಸಹೋದರಿ, ಸಹೋದರ ಸೇರಿದಂತೆ ಕುಟುಂಬದ ಜೀವನ ಸಾಗುತ್ತಿತ್ತು. ಈಗ ಶ್ರವಣ್ನನ್ನು ಕಳ್ಕೊಂಡ ಕುಟುಂಬ ಬೀದಿಗೆ ಬಿದ್ದಿದೆ.
ಕಣ್ಣೀರಲ್ಲಿ ವೀರ ಯೋಧನ ಕುಟುಂಬ ಶ್ರವಣ್ ಕಶ್ಯಪ್ 2007 ರಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು. ದುರ್ಗ್ ಎಸ್‌ಟಿಎಫ್ ಬೇಸ್ ಕ್ಯಾಂಪ್‌ನಲ್ಲಿ ತರಬೇತಿ ಪಡೆದ ನಂತರ ಬಸ್ತಾರ್ ವಿಭಾಗದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಇವ್ರಿಗೆ ಸುಕ್ಮಾದ ಹಳ್ಳಿಯೊಂದರ ಪೊಲೀಸ್ ಕ್ಯಾಂಪ್‌ನಲ್ಲಿ ಪೋಸ್ಟಿಂಗ್ ಮಾಡಲಾಗಿತ್ತು. ಅಲ್ಲೇ ಅವರು ಕಾರ್ಯ ನಿರ್ವಹಿಸುತ್ತಿದ್ದರು.
2013 ರಲ್ಲಿ ಶ್ರವಣ್ ಬಕವಾಂಡ್‌ನ ಧೂತಿಕಾರೊಂದಿಗೆ ವಿವಾಹವಾದರು. ಈಗ ಧೂತಿಕಾಗೆ ಐದು ವರ್ಷದ ಮಗನಿದ್ದು, ಎರಡು ತಿಂಗಳ ಗರ್ಭಿಣಿಯೂ ಆಗಿದ್ದಾರೆ. ಈ ಬಗ್ಗೆ ಶ್ರವಣ್ಗೆ ತಿಳಿದಾಗ ಹೋಳಿ ಹಬ್ಬಕ್ಕೆ ಮನೆಗೆ ಹಿಂದಿರುಗುವ ಭರವಸೆ ನೀಡಿದ್ದರಂತೆ. ಅಷ್ಟೊತ್ತಿಗಾಗಲೇ ವಿಧಿ ಅವರ ಬದುಕು ಕಸಿದುಕೊಂಡಿತು.
ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೋಗುವ ಮುನ್ನ ಶುಕ್ರವಾರ ರಾತ್ರಿ ಫೋನ್ ಮೂಲಕ ತನ್ನ ಕುಟುಂಬಸ್ಥರೊಂದಿಗೆ ಮಾತನಾಡಿದ್ದರು. ಈ ಸಮಯದಲ್ಲಿ ಶ್ರವಣ್ ತಮ್ಮ ಮಗನೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದರಂತೆ. ಇದಾದ ಮರುದಿನ 22 ಯೋಧರು ಹುತಾತ್ಮರಾಗಿರುವ ಆಘಾತಕಾರಿ ಸುದ್ದಿ ಬಂದಿದೆ. ಹೀಗೆ ಹುತಾತ್ಮರಾದ ಯೋಧರ ಪೈಕಿ ಶ್ರವಣ್ ಸಹ ಒಬ್ಬರು. ಈ ಸುದ್ದಿ ತಿಳಿದು ಇಡೀ ಕುಟುಂಬವೇ ಶಾಕ್ಗೆ ಗುರಿಯಾಗಿತ್ತು.
ಹುತಾತ್ಮ ಸೈನಿಕನ ಹಿರಿಯ ಸಹೋದರ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವ್ರಿಗೆ ಕುಟುಂಬ ನಡೆಸುವುದು ಬಹಳ ಕಷ್ಟ. ಸಹೋದರ ಶ್ರವಣ್ ಕೆಲಸದಿಂದ ಇಡೀ ಕುಟುಂಬದ ಜೀವನ ಸಾಗುತ್ತಿತ್ತು. ನಕ್ಸಲರ ವಿರುದ್ಧ ಹೋರಾಡಿ ಆತ ಮಡಿದಿದ್ದಾನೆ. ಆದ್ರೆ ಅವನಿಲ್ಲದ ಜೀವನ ಊಹಿಸಿಕೊಳ್ಳವುದು ಕಷ್ಟ ಎಂದು ಅವರ ದು:ಖದ ನುಡಿ.
ಹುತಾತ್ಮ ತಂದೆಯ ಫೋಟೋಗೆ ನಮಸ್ಕರಿಸುತ್ತಿರುವ ಐದು ವರ್ಷದ ಮುಗ್ಧ ಆತ ತನ್ನ ಮನೆಯ ಪ್ರತಿಯೊಬ್ಬ ಸದಸ್ಯರನ್ನೂ ಪ್ರೀತಿಸುತ್ತಿದ್ದ. ಯಾವಾಗಲೂ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ ಯೋಗಕ್ಷೇಮ ವಿಚಾರಿಸುತ್ತಿದ್ದ ಎಂದು ತಾಯಿ ಸ್ಮರಿಸುತ್ತಾರೆ.