ಜಮ್‌ಶೆಡ್‌ಪುರ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯದಲ್ಲಿ ಮಕ್ಕಳನ್ನು ಕಾಲುವೆ ಅಥವಾ ಮರದೊಂದಿಗೆ ಮದುವೆ ಮಾಡುವ ಹಳೆಯ ಸಂಪ್ರದಾಯವು ಚಾಲ್ತಿಯಲ್ಲಿದೆ. ಗ್ರಾಮಸ್ಥರ ಪ್ರಕಾರ, ಮಗುವಿಗೆ ಮತ್ತು ಭವಿಷ್ಯದಲ್ಲಿ ಸಂಗಾತಿಗೆ ದೀರ್ಘಾಯುಷ್ಯಕ್ಕಾಗಿ ಇಂಥದೊಂದು ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಒಡಿಶಾ ಮತ್ತು ಬಂಗಾಳದ ಗಡಿಗಳಿಗೆ ಹತ್ತಿರದಲ್ಲಿ ವಾಸಿಸುವ ಜಾರ್ಖಂಡ್ ರಾಜ್ಯದ ಜನರಲ್ಲಿ ಈ ಸಂಪ್ರದಾಯ ಹೆಚ್ಚಾಗಿ ಪ್ರಚಲಿತವಾಗಿದೆ. ಮಕರ ಸಂಕ್ರಾಂತಿಯ ನಂತರದ ಎರಡನೇ ದಿನ ಇಂಥ ವಿವಾಹ ಏರ್ಪಡಿಸಲಾಗುತ್ತದೆ. ಮಕರ ಸಂಕ್ರಾಂತಿ ನಂತರ ಎರಡನೇ ದಿನವು ಧಾರ್ಮಿಕ ಆಚರಣೆಗಳಿಗಾಗಿ ಮಂಗಳಕರ ದಿನ ಎಂದು ಬುಡಕಟ್ಟು ಜನ ನಂಬುತ್ತಾರೆ.
ಮಕ್ಕಳ ಆಯ್ಕೆ ಹೇಗೆ?: ಮಗುವಿಗೆ ಮೊದಲ ಎರಡು ಮೇಲಿನ ಹಲ್ಲುಗಳು ಕಾಣಿಸಿಕೊಂಡಾಗ ಅಂಥ ಮಕ್ಕಳನ್ನು ಈ ಆಚರಣೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿ ಮೊದಲಿಗೆ ಕೆಳಗಿನ ಎರಡು ಹಲ್ಲು ಮೂಡುತ್ತವೆ. ಇವು ಕಾಣಿಸಿ 4 ರಿಂದ 8 ವಾರಗಳ ನಂತರ ಮೇಲಿನ ಹಲ್ಲುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಮೇಲಿನ ಹಲ್ಲುಗಳೇ ಮೊದಲು ಕಾಣಿಸಿಕೊಂಡರೆ ಅಂಥ ಮಕ್ಕಳಿಗೆ ಕಾಲುವೆ ಅಥವಾ ಮರದೊಂದಿಗೆ ವಿವಾಹ ಮಾಡಲಾಗುತ್ತದೆ.
ಈ ಸಂಪ್ರದಾಯದ ಕುರಿತಾಗಿ ಮಾತನಾಡಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಸಾರಿ ಸಿಂಗ್ ಸದರ್, ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸಲು ಕುಟುಂಬದವರು ಎಲ್ಲ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಮದುವೆ ಮಾಡುತ್ತಾರೆ. ಜೀವನದಲ್ಲಿ ಎದುರಾಗಬಹುದಾದ ಅಶುಭ ಘಟನೆಗಳಿಂದ ಮಗುವನ್ನು ರಕ್ಷಿಸಲು ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.