ರಾಯ್ ಬರೇಲಿ: ನಗರದಲ್ಲಿ ನಡೆದ ಮದುವೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಈ ಮದುವೆ ಸಾಮಾನ್ಯ ವ್ಯಕ್ತಿಯದ್ದಲ್ಲ ದೇಶ ರಕ್ಷಣೆಯಲ್ಲಿ ಹುತಾತ್ಮರಾದ ಸಹೋದರಿಯದ್ದು. ಕಳೆದ ವರ್ಷ ಈ ಸಹೋದರಿ ತನ್ನ ಸಹೋದರನನ್ನು ಕಳೆದುಕೊಂಡಿದ್ದಳು. ಆದರೆ, ಹುತಾತ್ಮರಾದ ತನ್ನ ಸಹೋದರನ ಸ್ಥಾನವನ್ನು ನಮ್ಮ ದೇಶದ ಜವಾನರು ಆಕೆಗೆ ತುಂಬಿದ್ದಾರೆ.
ಹುತಾತ್ಮ ಯೋಧನ ಹಲವಾರು ಸಹೋದ್ಯೋಗಿಗಳು ಅವರ ಮದುವೆಯಲ್ಲಿ ಭಾಗಿಯಾಗಿ ಸಹೋದರ ಮಾಡಬೇಕಾದ ಎಲ್ಲ ಸಾಂಪ್ರದಾಯಿಕ ಕೆಲಸಗಳನ್ನೂ ಮಾಡಿದ್ದಾರೆ. ಇವರ ಈ ವಿಶಿಷ್ಟ ಕೆಲಸದಿಂದ ಈ ಮದುವೆಯು ಸ್ಮರಣೀಯವಾಗಿದೆ. ಅಷ್ಟೇ ಅಲ್ಲ ಕುಟುಂಬದ ಸದಸ್ಯರಿಗೆ ಮರೆಯಲಾಗದ ಘಟನೆಯಾಗಿದೆ.
ಮದುವೆ ನಡೆದಿದ್ದು ಎಲ್ಲಿ?
ನಗರದ ಪ್ಲೆಸೆಂಟ್ ವ್ಯೂ ಮ್ಯಾರೇಜ್ ಹಾಲ್‌ನಲ್ಲಿ ಬುಧವಾರ ರಾತ್ರಿ ಜ್ಯೋತಿ ಅವರ ಮದುವೆ ನಡೆದಿದೆ. ಜ್ಯೋತಿ ಅವರ ಸಹೋದರ ಶೈಲೇಂದ್ರ ಪ್ರತಾಪ್ ಸಿಂಗ್ ಅವರು ಸಿಆರ್‌ಪಿಎಫ್ ಜವಾನರಾಗಿದ್ದು, ಶೈಲೇಂದ್ರ ಅವರು 5 ಅಕ್ಟೋಬರ್ 2020 ರಂದು ಜಮ್ಮುವಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದರು. ಅವರ ಸಹೋದರಿ ಜ್ಯೋತಿಗೆ ಒಂದು ವರ್ಷದ ನಂತರ ವಿವಾಹ ನಿಶ್ಚಯವಾಗಿದ್ದು, ಅಂತೆಯೇ ಸಹೋದರನ ಜೊತೆ ಕೆಲಸ ಮಾಡುತ್ತಿದ್ದ ಇತರ ಯೋಧರಿಗೆ ಈ ಕುಟುಂಬ ಆಹ್ವಾನ ನೀಡಿದೆ.
ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ ಭೂಮಿ ಪುತ್ರರು! ಆಹ್ವಾನ ಸ್ವೀಕರಿಸಿದ ನಮ್ಮ ದೇಶದ ಹೆಮ್ಮೆಯ ಸೈನಿಕರು ಸಮವಸ್ತ್ರ ಧರಿಸಿಯೇ ಈ ಶುಭ ಕಾರ್ಯಕ್ಕೆ ಆಗಮಿಸಿದ್ದಾರೆ. ಹುತಾತ್ಮನಾದ ತಮ್ಮ ಗೆಳೆಯನ ಎಲ್ಲ ಕರ್ತವ್ಯಗಳನ್ನು ಇವರು ನಡೆಸಿಕೊಟ್ಟದ್ದಾರೆ. ಆರತಕ್ಷತೆಯಿಂದ ಹಿಡಿದು ಬೀಳ್ಕೊಡುವವರೆಗೆ ಇವರು ಪ್ರತಿಯೊಂದು ವಿಧಿವಿಧಾನವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟು, ವಧು-ವರರಿಗೆ ಉಡುಗೊರೆ ನೀಡಿ ಆಶೀರ್ವದಿಸಿದ್ದಾರೆ.
ಇದನ್ನೂ ಓದಿ:ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: 2 ವಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಹುತಾತ್ಮ ಯೋಧನ ತಂದೆ ನರೇಂದ್ರ ಬಹದ್ದೂರ್ ಸಿಂಗ್ ತಮ್ಮ ಮಗನ ಸಾವನ್ನು ನೆನೆದು ಕಣ್ಣಲ್ಲಿ ನೀರು ಬಂದರೂ ಈ ಮದುವೆಯಲ್ಲಿ ಸಮವಸ್ತ್ರಧಾರಿ ಸೈನಿಕರ ಉಪಸ್ಥಿತಿಯು ಅವರಿಗೆ ಹೆಮ್ಮೆ ತಂದಿದೆ. ನಾವು ಪ್ರತಿ ಕ್ಷಣವೂ ನಿಮ್ಮೊಂದಿಗಿದ್ದೇವೆ ಎಂದು ಈ ಸೈನಿಕರು ಭರವಸೆ ನೀಡಿ ಮತ್ತೇ ದೇಶಸೇವೆಗೆ ಮರಳಿದ್ದಾರೆ. ಹುತಾತ್ಮನ ತಂದೆ ಈ ಘಟನೆಗೆ ತುಂಬಾ ಹೆಮ್ಮೆ ಪಟ್ಟು, ಒಬ್ಬ ಮಗನಿಂದ ನೂರಾರು ಮಕ್ಕಳು ನನಗೆ ಸಿಕ್ಕಿದ್ದಾರೆ ಎಂದು ಸಂತಸ ಹೊರಹಾಕಿದ್ದಾರೆ.