ಕೋಯಿಕ್ಕೋಡ್ : ಕೇರಳ ರಾಜ್ಯ ವಿಶಿಷ್ಟ ಕಲ್ಯಾಣ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಿದೆ. ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಕೇರಳದ ಕೋಯಿಕ್ಕೋಡ್ನ ಪ್ರತಿಭಟನಾಕಾರರಿಗೆ ಮಾತ್ರ ಅದು ಲಿಕ್ಕರ್ ಶಾಪ್ ಮುಂದೆ ಆಗಿದೆ.
ಎಲ್ಲರಿಗೂ ತಿಳಿದಿರುವ ಹಾಗೆ ಕೇರಳ ಭವ್ಯ ಸಾಂಪ್ರದಾಯಿಕ ವಿವಾಹಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನಡೆಯುವ ಅದ್ಧೂರಿ ವಿವಾಹ ಕಾರ್ಯಕ್ರಮಗಳನ್ನೇ ನಂಬಿ ಅನೇಕ ಮಂದಿ ಜೀವನ ಸಾಗಿಸುತ್ತಿದ್ದಾರೆ. ಮದುವೆ ಕಾರ್ಯಕ್ರಮಗಳಲ್ಲಿ ವಿವಿಧ ಕೆಲಸಗಳನ್ನು ಮಾಡುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ.
ಲಿಕ್ಕರ್ ಶಾಪ್ ಮುಂದೆ ಮದುವೆಯಾದ ಜೋಡಿ ಆದರೆ, ಕೋವಿಡ್ ಆವರಿಸಿಕೊಂಡ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಅದ್ಧೂರಿಯಾಗಿ ನಡೆಯಬೇಕಿದ್ದ ಕಾರ್ಯಕ್ರಮಗಳೆಲ್ಲ ಸರಳವಾಗಿ ಜರುಗುತ್ತಿವೆ. ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಡಿಎಫ್ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳು ಶುಭ ಸಮಾರಂಭಗಳಿಗೆ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆದರೆ, ರಾಜ್ಯ ಸರ್ಕಾರದ ಅಧೀನ ಪಾನಿಯಾ ಕಂಪನಿಗಳಿಗೆ (ಲಿಕ್ಕರ್ ಕಂಪನಿಗಳು) ನಿಯಮಗಳಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಿದೆ. ಪರಿಣಾಮ ಸರ್ಕಾರದ ಅಧೀನದ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ (ಐಎಮ್ಎಫ್ಎಲ್ ) ಔಟ್ ಲೆಟ್ಗಳ ಮುಂದೆ ಜನ ಯಾವುದೇ ನಿಯಮಗಳನ್ನು ಪಾಲಿಸದೆ ಸೇರುತ್ತಿದ್ದಾರೆ.
ಓದಿ : ಹಣದಾಸೆಗೆ ದೇಶದ್ರೋಹ.. ಪಾಕ್ನ ಐಎಸ್ಐಗೆ ಗೌಪ್ಯ ಮಾಹಿತಿ ಹಂಚುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಅರೆಸ್ಟ್
ಲಿಕ್ಕರ್ ಔಟ್ಲೆಟ್ಗಳ ಮುಂದೆ ಜನ ಗುಂಪು ಗುಂಪಾಗಿ ಸೇರಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದರೂ, ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ, ಯಾರ ಮೇಲೂ ಕ್ರಮಕೈಗೊಂಡಿಲ್ಲ. ಸರ್ಕಾರದ ಈ ದ್ವಿಮುಖ ನೀತಿಯನ್ನು ಖಂಡಿಸಿ ಕೇರಳ ರಾಜ್ಯ ಕ್ಯಾಟರರ್ಸ್ ಅಸೋಸಿಯೇಶನ್ ಸದಸ್ಯರು ಲಿಕ್ಕರ್ ಶಾಪ್ ಮುಂದೆ ಮದುವೆ ಮಾಡಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.
ಕೋಝಿಕ್ಕೋಡ್ನ ಸರೋವರಂ ಲಿಕ್ಕರ್ ಶಾಪ್ ಮುಂದೆ ಈ ಸಾಂಕೇತಿಕ ವಿವಾಹ ಕಾರ್ಯಕ್ರಮ ನಡೆಯಿತು. ರಾಮನಟ್ಟುಕಾರದ ಪ್ರಮೋದ್ ಮತ್ತು ಪಂಥೀರನ್ಕಾವಿನ ಧನ್ಯಾ ಲಿಕ್ಕರ್ ಶಾಪ್ ಮುಂದೆ ಸಾಂಕೇತಿಕವಾಗಿ ವಿವಾಹವಾದರು. ಕೋಝಿಕ್ಕೋಡ್ ಲೋಕಸಭಾ ಕ್ಷೇತ್ರ ಸಂಸದ ಎಂ.ಕೆ ರಾಘವನ್ ಮದುವೆಯ ನೇತೃತ್ವದ ವಹಿಸಿದ್ದರು.
ಈ ಬಗ್ಗೆ ಮಾತನಾಡಿದ ಸಂಸದ ಎಂ.ಕೆ. ರಾಘವನ್, ಲಿಕ್ಕರ್ ಶಾಪ್ ಮುಂದೆ ಮದುವೆಯಾದರೆ ಪೊಲೀಸರು ತೊಂದರೆ ಕೊಡುವುದಿಲ್ಲ. ಹಾಗಾಗಿ, ಇಲ್ಲಿ ಮದುವೆ ಮಾಡಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟಿಸಿದ್ದೇವೆ. ಸರ್ಕಾರದ ಕಠಿಣ ನಿಯಮಗಳಿಂದಾಗಿ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯದೆ ಅನೇಕ ಮಂದಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.