ನವದೆಹಲಿ:ಮಾರ್ಗದರ್ಶಿ ಚಿಟ್ ಫಂಡ್ ಕಂಪನಿ ಪ್ರಕರಣದಲ್ಲಿ ಆಂಧ್ರ ಪ್ರದೇಶ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಮಾರ್ಗದರ್ಶಿ ಅಧ್ಯಕ್ಷ ರಾಮೋಜಿ ರಾವ್ ಮತ್ತು ಎಂಡಿ ಶೈಲಜಾ ಕಿರಣ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ತೆಲಂಗಾಣ ಹೈಕೋರ್ಟ್ ಹೊರಡಿಸಿರುವ ಮಧ್ಯಂತರ ಆದೇಶದ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಇದೇ ವೇಳೆ, ತೆಲಂಗಾಣ ಹೈಕೋರ್ಟ್ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದೂ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ಮಾರ್ಗದರ್ಶಿ ಚಿಟ್ ಫಂಡ್ ಕಂಪನಿ ವಿರುದ್ಧ ಆಂಧ್ರ ಪ್ರದೇಶದ ಸಿಐಡಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ಆಲಿಸಲು ತನಗೆ ಅಧಿಕಾರವಿದೆ ಎಂದು ಈ ಹಿಂದೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಮಾರ್ಗದರ್ಶಿ ಅಧ್ಯಕ್ಷ ರಾಮೋಜಿ ರಾವ್ ಮತ್ತು ಎಂಡಿ ಶೈಲಜಾ ಕಿರಣ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ತೆಲಂಗಾಣ ಹೈಕೋರ್ಟ್ ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಎರಡು ರಜಾ ಕಾಲದ ಅರ್ಜಿಗಳನ್ನು (SLP) ಸಲ್ಲಿಸಿತ್ತು. ತೆಲಂಗಾಣ ಹೈಕೋರ್ಟ್ ನ್ಯಾಯ ವ್ಯಾಪ್ತಿಯನ್ನು ಪ್ರಶ್ನಿಸಿ ಅರ್ಜಿಗಳನ್ನೂ ಸಲ್ಲಿಸಲಾಗಿತ್ತು. ಇಂದು ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸುವ ಮೂಲಕ ಎರಡೂ ಅರ್ಜಿಗಳನ್ನು ವಜಾಗೊಳಿಸಿದೆ.
ಇದೇ ಸಂದರ್ಭದಲ್ಲಿ ಪ್ರಕರಣದಲ್ಲಿ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುವ ಅಗತ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು ತೆಲಂಗಾಣ ಹೈಕೋರ್ಟ್ನಲ್ಲಿಯೇ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿತು.
''ಹೈಕೋರ್ಟ್ ಅರ್ಜಿಯನ್ನು ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಬೇಕು. ಅದರ ಪ್ರಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಯಾವುದೇ ನಿರ್ದಿಷ್ಟ ಸಂದರ್ಭ ಎದುರಾದರೆ ಅರ್ಜಿದಾರರು (ಆಂಧ್ರಪ್ರದೇಶ ಸರ್ಕಾರ) ಈ ನ್ಯಾಯಾಲಯಕ್ಕೆ ಬರಬಹುದು. ಅಂಥ ಸಮಯದಲ್ಲಿ ಸರ್ಕಾರ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸುವ ಸ್ವಾತಂತ್ರ್ಯ ಹೊಂದಿರುತ್ತದೆ'' ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.