ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಮೀಸಲಾತಿ ಹೋರಾಟ: ಕರ್ನಾಟಕದ 2 ಬಸ್ ಸೇರಿ 6 ಬಸ್​ಗಳಿಗೆ ಬೆಂಕಿ, 85 ಮಂದಿಗೆ ಗಾಯ - ಮರಾಠಾ ಮೀಸಲಾತಿ

Maratha reservation protest turns violent: ಮಹಾರಾಷ್ಟ್ರದ ಜಾಲನಾ ಜಿಲ್ಲೆಯಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟ ಎಲ್ಲೆ ಮೀರಿದೆ. ಕೆಎಸ್‌ಆರ್‌ಟಿಸಿ ಬಸ್, ಮಹಾರಾಷ್ಟ್ರ ಸಾರಿಗೆ ಬಸ್ ಸೇರಿ ಆರು ಬಸ್​ಗಳಿಗೆ ಬೆಂಕಿ ಹಚ್ಚಲಾಗಿದೆ.

Buses set fire
ಬಸ್​ಗಳಿಗೆ ಬೆಂಕಿ

By ETV Bharat Karnataka Team

Published : Sep 2, 2023, 9:30 AM IST

ಬೆಳಗಾವಿ: 'ಮರಾಠಾ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಶುಕ್ರವಾರ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಆರು ಬಸ್​​ಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ಕರ್ನಾಟಕದ ಎರಡು ಬಸ್​​​​​ಗಳಿಗೂ ಬೆಂಕಿ ತಗುಲಿದ್ದು, ಸುಮಾರು 85ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ವಿವಿಧೆಡೆ ಮರಾಠಾ ಮೀಸಲಾತಿಗೆ ಒತ್ತಾಯಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿವೆ. ಜಾಲನಾ ಜಿಲ್ಲೆಯ ಶಹಘಡ ಬಳಿ ನಡೆದ ಹೋರಾಟದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉದ್ರಿಕ್ತರ ಗುಂಪು ಧುಳೆ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದರು. ಇದನ್ನು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹೋರಾಟಗಾರರು ಹೆದ್ದಾರಿಯಲ್ಲಿ ಸಿಕ್ಕ ಸಿಕ್ಕ ಬಸ್​​ಗಳ ಮೇಲೆ ಕಲ್ಲು ತೂರಿದ್ದಾರೆ. ಪ್ರಯಾಣಿಕರು ಬಸ್​​ನಲ್ಲಿ ಇದ್ದಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ನೋಡ ನೋಡುತ್ತಿದ್ದಂತೆ ಆರು ಬಸ್ಸುಗಳು ಧಗಧಗನೇ ಹೊತ್ತಿ ಉರಿದಿವೆ.

ಔರಾಂಗಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕೆಎಸ್ಆರ್​ಟಿಸಿ ಬಸ್‌ನಲ್ಲಿ 45 ಪ್ರಯಾಣಿಕರಿದ್ದರು. ಈ ಬಸ್ಸಿಗೂ ಬೆಂಕಿ ಹಚ್ಚಲಾಗಿದೆ ಎಂದು ಚಾಲಕ, ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಎಲ್.ಎಲ್. ಲಮಾಣಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಕರ್ನಾಟಕದ ಮತ್ತೊಂದು ಬಸ್​​ಗೂ ಬೆಂಕಿ ಹಚ್ಚಲಾಗಿದೆ. ಘಟನೆಯಿಂದ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿಂದೆ ಮರಾಠಾ ಸಮುದಾಯಕ್ಕೆ ರಾಜ್ಯ ಸರ್ಕಾರ ನೀಡಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈ ಹಿನ್ನೆಲೆ​ ಹೋರಾಟಗಾರರು ಜಾಲನಾ ಜಿಲ್ಲೆಯ ಶಹಘಡ ಬಳಿ ಹೆದ್ದಾರಿ ತಡೆದು ಹಿಂಸೆಗೆ ಮುಂದಾಗಿದ್ದಾರೆ.

ಪ್ರತಿಭಟನಾನಿರತ ಯುವಕ ಆತ್ಮಹತ್ಯೆ: ರಾಜಸ್ಥಾನದಲ್ಲಿ ಸೈನಿ ಸಮಾಜ ಮೀಸಲಾತಿ ಹೋರಾಟಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಮೃತರನ್ನು ಮೋಹನ್ ಸೈನಿ ಎಂದು ಗುರುತಿಸಲಾಗಿತ್ತು. ಮೀಸಲಾತಿ ಹೋರಾಟ ಸ್ಥಳವಾದ ಭರತ್​ಪುರ ಜಿಲ್ಲೆಯ ಅರೋರಾದಲ್ಲಿ ಘಟನೆ ಜರುಗಿತ್ತು. ಸೈನಿ ಸಮಾಜ ಆರಕ್ಷಣ್ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಏಪ್ರಿಲ್ 21ರಿಂದ ಅರೋರಾ ಬಳಿಯ ಜೈಪುರ ಆಗ್ರಾ ಹೆದ್ದಾರಿಯಲ್ಲಿ ಮೀಸಲಾತಿ ಚಳವಳಿ ಆರಂಭಿಸಲಾಗಿದೆ. ಈ ಚಳವಳಿಯಲ್ಲಿ ಪಾಲ್ಗೊಂಡಿದ್ದ ಯುವಕ ಹೋರಾಟಗಾರ ಮೋಹನ್ ಸೈನಿ ಶವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಪ್ರತಿಭಟನಾನಿರತ ಸೈನಿ ಸಮಾಜದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಸೈನಿ ಸಮಾಜ ಬೇಡಿಕೆ ಏನು?:ಸೈನಿ ಸಮುದಾಯಕ್ಕೆ ಶೇ.12ರಷ್ಟು ಮೀಸಲಾತಿ ನೀಡಬೇಕು. ರಾಜ್ಯ ಲವಕುಶ ಕಲ್ಯಾಣ ಮಂಡಳಿ ರಚನೆ ಹಾಗೂ ಲವಕುಶ ಹಾಸ್ಟೆಲ್​ಗಳ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದೆಯಾಗಿದೆ. ಇದಕ್ಕೂ ಮೊದಲು ಏಪ್ರಿಲ್ 20ರಂದು ಸೈನಿ ಸಮಾಜ ಆರಕ್ಷಣ್ ಸಂಘರ್ಷ ಸಮಿತಿಯ ಸಂಚಾಲಕ ಮುರಾರಿ ಲಾಲ್ ಸೈನಿ ಸೇರಿದಂತೆ 26 ಜನರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಸೈನಿ ಸಮಾಜ ಮೀಸಲಾತಿ ಹೋರಾಟ: ಪ್ರತಿಭಟನಾನಿರತ ಯುವಕ ಆತ್ಮಹತ್ಯೆ

ABOUT THE AUTHOR

...view details