ಮುಂಬೈ: ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ದಿನ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸತ್ಯಾಗ್ರಹಕ್ಕೆ ನವಿ ಮುಂಬೈನ ಎಪಿಎಂಸಿ ಮಾರುಕಟ್ಟೆಯ ಕಾರ್ಮಿಕರು ಸೇರಿ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ನಾಗರಿಕರಿಗೆ ಆಹಾರದ ಕೊರತೆಯಾಗದಂತೆ ಎಲ್ಲ ಕಾರ್ಮಿಕರು ಸಾಂಕೇತಿಕ ಮುಷ್ಕರಕ್ಕೆ ಇಳಿದಿದ್ದಾರೆ. ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳನ್ನು ಹೊರತುಪಡಿಸಿ ಇಲ್ಲಿಯ ಪ್ರಮುಖ ಮೂರು ಮಾರುಕಟ್ಟೆಗಳನ್ನು ಬಂದ್ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ನೀರು ಕೂಡಾ ಸೇವಿಸದಿರುವ ಮನೋಜ್, ಇಂದು ವೈದ್ಯರಿಂದ ತಪಾಸಣೆಗೆ ನಿರಾಕರಿಸಿದರು.
''ಶಿಕ್ಷಣ ಸಂಸ್ಥೆ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸಿಕೊಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ 40 ದಿನಗಳ ಗಡುವು ನೀಡಲಾಗಿತ್ತು. ಈ ಗಡುವು ಮುಕ್ತಾಯಗೊಂಡಿದೆ. ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ. ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಉದ್ದೇಶಪೂರ್ವಕವಾಗಿಯೇ ಮರಾಠಾ ಮೀಸಲಾತಿ ವಿಷಯ ಪ್ರಸ್ತಾಪಿಸದಿರುವುದು ನೋವು ತಂದಿದೆ. ನಮಗೆ ಪ್ರಧಾನಿ ಮೋದಿ ಬಗ್ಗೆ ಗೌರವವಿದೆ. ಈ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಅದೆಲ್ಲವೂ ಸುಳ್ಳಾಗಿದೆ. ಅಲ್ಲದೇ ಈ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಮರಾಠಾ ಯುವಕರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದ ಜನರ ನಂಬಿಕೆ ಪದೇ ಪದೇ ಹುಸಿಯಾಗುತ್ತಿದೆ. ಇಷ್ಟು ಕಾಲಾವಕಾಶ ನೀಡಿದರೂ ಮರಾಠ ಮೀಸಲಾತಿ ನೀಡಲಿಲ್ಲ'' ಎಂದು ಮನೋಜ್ ಜಾರಂಗೆ ಪಾಟೀಲ್ ಆರೋಪಿಸಿದರು.