ಮುಂಬೈ (ಮಹಾರಾಷ್ಟ್ರ) :ಮರಾಠ ಸಮುದಾಯದ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹೋರಾಟಗಾರರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದೀಗ ಮಜಲ್ಗಾಂವ್ ನಗರಸಭೆ ಕಟ್ಟಡಕ್ಕೆ ಬೆಂಕಿ ಇಟ್ಟಿದ್ದಾರೆ. ಅಲ್ಲದೇ, ಇಬ್ಬರು ಶಿವಸೇನೆ ಸಂಸದರು (ಶಿಂಧೆ ಬಣ) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೋರಾಟದಿಂದ ಬೆಚ್ಚಿರುವ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮಂಡಿಸುವ ಸಾಧ್ಯತೆ ಇದೆ.
ಜಾರಂಗೆ ಪಾಟೀಲ ಅವರು ಕರೆ ನೀಡಿರುವ ಆಂದೋಲನಕ್ಕೆ ರಾಜ್ಯಾದ್ಯಂತ ಮರಾಠ ಸಮುದಾಯದಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಸೋಮವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಮರಾಠಾ ಸಮುದಾಯಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಕೋಪಗೊಂಡ ಹೋರಾಟಗರರು ಎನ್‌ಸಿಪಿ ಶಾಸಕರಾದ ಪ್ರಕಾಶ್ ಸೋಲಂಕೆ ಮತ್ತು ಸಂದೀಪ್ ಕ್ಷೀರಸಾಗರ್ ಅವರ ಮನೆಗಳಿಗೆ ಬೆಂಕಿ ಹಚ್ಚಿ, ವಾಹನಗಳನ್ನು ಸುಟ್ಟು ಹಾಕಿದ್ದರು.
ಇದನ್ನು ಖಂಡಿಸಿದ ಎನ್‌ಸಿಪಿ ಸರ್ಕಾರದ ವಿರುದ್ಧ ಕಿಡಿಕಾರಿತ್ತು. ಕೂಡಲೇ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇದರ ಬೆನ್ನಲ್ಲೇ ಎನ್‌ಸಿಪಿ ಸಚಿವ ಛಗನ್ ಭುಜಬಲ್ ನಿನ್ನೆ ರಾತ್ರಿಯೇ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾತ್ರಿಯೇ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ದೇವೇಂದ್ರ ಫಡ್ವವೀಸ್ರ ಜೊತೆಗೂ ಮುಖ್ಯಮಂತ್ರಿ ಶಿಂಧೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯೂ ಇದೆ.