ನವದೆಹಲಿ: ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಎಲ್ಲ ರೀತಿಯ ಮಾವೋವಾದವನ್ನು ತೊಡೆದುಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸರ್ಕಾರ ಈಗಾಗಲೇ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಳವಡಿಸಿಕೊಂಡಿದೆ. ಈಗ ಯುವ ಪೀಳಿಗೆ ದಾರಿತಪ್ಪದಂತೆ ರಕ್ಷಿಸಲು ನಗರ ನಕ್ಸಲರು ಅಥವಾ ಪೆನ್ ಹಿಡಿದ ಮಾವೋವಾದಿಗಳನ್ನು ನಿಗ್ರಹಿಸುವ ಸಮಯ ಬಂದಿದೆ ಎಂದು ಒತ್ತಿ ಹೇಳಿದರು.
ಆಂತರಿಕ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಶುಕ್ರವಾರ ಆಯೋಜಿಸಲಾದ ಗೃಹ ಸಚಿವಾಲಯದ ಚಿಂತನ್ ಶಿಬಿರದಲ್ಲಿ ವರ್ಚುವಲ್ ಮೂಲಕ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಮಾವೋವಾದಿ ಪೀಡಿತ ಜಿಲ್ಲೆಗಳತ್ತ ಗಮನಹರಿಸುತ್ತಿದೆ. ಮಾವೋವಾದವು ಗನ್ ಅಥವಾ ಪೆನ್ ಮೂಲಕವೇ ಇರಲಿ, ಬೇರುಸಹಿತ ಕಿತ್ತು ಹಾಕಬೇಕೆಂದು ತಿಳಿಸಿದರು.
ಮಾವೋವಾದಿಗಳು ಪೆನ್ ಮೂಲಕ ತಮ್ಮ ಬೌದ್ಧಿಕ ವಲಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಪೀಳಿಗೆಯಲ್ಲಿ ತಮ್ಮ ವಿಕೃತ ಮನಸ್ಥಿತಿಯನ್ನು ಸೃಷ್ಟಿಸಬಹುದಾದ ಸ್ಥಳಗಳನ್ನು ಆವರಿಸಿಕೊಳ್ಳುತ್ತಿದ್ದಾರೆ. ಇದು ಮುಂದೆ ಸಮಾಜದಲ್ಲಿ ಬಿರುಕಿಗೆ ಕಾರಣವಾಗಬಹುದು ಎಂದು ಪ್ರಧಾನಿ ಎಚ್ಚರಿಸಿದರು.
ಮಾವೋವಾದಿಗಳಿಗೆ ವಿದೇಶಿ ನೆರವು:ಮಾವೋವಾದವನ್ನು ತಜ್ಞರು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು. ಅವರ ಮುಖಗಳು ವಿಭಿನ್ನವಾಗಿ ಕಾಣುತ್ತವೆ. ಅವರು ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ಇದನ್ನು ಭದ್ರತಾ ಏಜೆನ್ಸಿಗಳು ಅರ್ಥಮಾಡಿಕೊಳ್ಳಬೇಕು. ಮಾವೋವಾದಿಗಳು ವಿದೇಶಿ ನೆರವನ್ನೂ ಸಹ ಪಡೆಯುತ್ತಾರೆ ಎಂದು ಮೋದಿ ತಿಳಿಸಿದರು.