ಭದ್ರಾದ್ರಿ ಕೊತ್ತಗುಡೆಂ (ತೆಲಂಗಾಣ):ಛತ್ತೀಸ್‌ಗಢ-ತೆಲಂಗಾಣ ರಾಜ್ಯಗಳ ಗಡಿಯಲ್ಲಿ ಮಾವೋವಾದಿಗಳು 25 ವ್ಯಾಪಾರಿಗಳನ್ನು ಅಪಹರಿಸಿದ್ದರು ಎಂಬ ಸುದ್ದಿ ಸದ್ದು ಮಾಡುತ್ತಿದೆ. ನಮ್ಮ ವಿರುದ್ಧ ಕೆಲಸ ಮಾಡಿ ಪೊಲೀಸರಿಗೆ ಸಹಕರಿಸಿದರೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿ ಕೈಬಿಟ್ಟಿರುವುದು ಈ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಗೊಲ್ಲಪಲ್ಲಿಯಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ನಡೆದ ವಾರದ ಮಾರುಕಟ್ಟೆಗೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ದುಮ್ಮುಗುಡೆಂ ತಾಲೂಕಿನಿಂದ 25 ವ್ಯಾಪಾರಿಗಳು ಆಟೋ ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳಿದ್ದರು. ಭದ್ರಾದ್ರಿ ಕೊತ್ತಗುಡೆಂ ಮತ್ತು ಸುಕ್ಮಾ ಜಿಲ್ಲೆಗಳ ಗಡಿಭಾಗದ ತಲ್ಲಗುಡೆಂ-ಗೊಲ್ಲಪಲ್ಲಿ ಅಡ್ಡರಸ್ತೆಯಲ್ಲಿ ಮಾವೋವಾದಿಗಳು ವಾಹನಗಳನ್ನು ತಡೆದು ವ್ಯಾಪಾರಸ್ಥರನ್ನು ಕೆಳಗಿಳಿಸಿದ್ದರು. ಬಳಿಕ ಆಟೋ ಮತ್ತು ವಾಹನಗಳಿಂದ ಅಗತ್ಯ ವಸ್ತುಗಳು ಮತ್ತು ಮದ್ಯದ ಬಾಟಲಿಗಳನ್ನು ಹೊರಗಡೆ ಎಸೆದಿದ್ದಾರೆ. ಅವರ ಮೊಬೈಲ್‌ಗಳನ್ನು ಕಿತ್ತುಕೊಂಡು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು. ಅವರಲ್ಲಿ ಕೆಲವರು ಮಹಿಳಾ ವ್ಯಾಪಾರಿಗಳೂ ಇದ್ದರು ಎಂದು ತಿಳಿದುಬಂದಿದೆ.
ಅಗತ್ಯ ವಸ್ತುಗಳನ್ನು ಪೂರೈಸುವುದರ ಜೊತೆಗೆ ಪೊಲೀಸರಿಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಲವರ ಮೇಲೆ ಮಾವೋವಾದಿಗಳು ಹಲ್ಲೆ ನಡೆಸಿದ್ದಾರೆ. ಅಂಥ ಯಾವುದೇ ಕೆಲಸವನ್ನು ನಾವು ಮಾಡುತ್ತಿಲ್ಲ. ನಾವೆಲ್ಲರೂ ಸ್ವಂತ ವ್ಯಾಪಾರ ಮಾಡಿಕೊಂಡು, ಜೀವನ ನಡೆಸುತ್ತಿದ್ದೇವೆ. ನಮ್ಮನ್ನು ಬಿಟ್ಟುಬಿಡಿ ಎಂದು ಅವರ ಬಳಿ ವ್ಯಾಪಾರಿಗಳು ಬೇಡಿಕೊಂಡಿದ್ದರು. ಬಳಿಕ ನಕ್ಸಲರು ತಮ್ಮ ವಿರುದ್ಧ ಕೆಲಸ ಮಾಡಿದರೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿ ಅಲ್ಲಿಂದ ತೆರಳಿದ್ದಾರೆ.