ಚೈಬಾಸಾ (ಜಾರ್ಖಂಡ್) : ಜಾರ್ಖಂಡ್‌ನ ಚೈಬಾಸಾ ಪ್ರದೇಶದ ಗೋಯಿಲ್ಕೆರಾ - ಪೊಸೈಟಾ ರೈಲು ನಿಲ್ದಾಣಗಳ ನಡುವಿನ ಕರೋ ಸೇತುವೆ ಬಳಿಯ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿದೆ. ಮಾಹಿತಿ ಪ್ರಕಾರ ಮಾವೋವಾದಿಗಳು ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಪರಿಣಾಮ ಹೌರಾ - ಮುಂಬೈ ಮುಖ್ಯ ರೈಲು ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಘಟನೆಯನ್ನು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸಿಪಿಐ ಮಾವೋವಾದಿ ಸಂಘಟನೆಯು ಡಿ.16 ರಿಂದ 22ರ ವರೆಗೆ ಪ್ರತಿರೋಧ ಸಪ್ತಾಹವನ್ನು ಆಚರಿಸುತ್ತಿದೆ. ಇದರ ಅಡಿ ಇಂದು ಭಾರತ್ ಬಂದ್ಗೆ ಕರೆ ನೀಡಲಾಗಿದೆ. ರೈಲ್ವೆ ಹಳಿ ಸ್ಫೋಟದ ನಂತರ ಹೌರಾ - ಮುಂಬೈ ಮುಖ್ಯ ರೈಲು ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ರೈಲು ಸಂಖ್ಯೆ 18030 ಶಾಲಿಮಾರ್ - ಕುರ್ಲಾ ಅಪ್ ಎಕ್ಸ್‌ಪ್ರೆಸ್ ಅನ್ನು ಮಹದೇವಶಾಲ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ರೈಲನ್ನು ಗೋಯಿಲಕೇರಾ ರೈಲು ನಿಲ್ದಾಣಕ್ಕೆ ತಂದು ನಿಲ್ಲಿಸಲಾಯಿತು. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಚಕ್ರಧರಪುರ ರೈಲ್ವೆ ವಿಭಾಗದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ರೈಲುಗಳ ಸಂಚಾರವನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಯಿತು.
ಇಷ್ಟೇ ಅಲ್ಲದೆ, ದೇರನವಾ ನಿಲ್ದಾಣದ ಬಳಿಯ ಅಪ್ ಲೈನ್ನಲ್ಲಿ ನಕ್ಸಲೀಯರು ಬ್ಯಾನರ್ ಹಾಕಿದ್ದರು. ಟಾಟಾ - ಇಟ್ವಾರಿ ಪ್ಯಾಸೆಂಜರ್ ರೈಲಿನ ಇಂಜಿನ್‌ನಲ್ಲಿ ಬ್ಯಾನರ್ ಸಿಕ್ಕಿಹಾಕಿಕೊಂಡು ಮುಂದೆ ಹೋಗಿದ್ದು, ಯಾರಿಗೂ ಗೊತ್ತಾಗಿಲ್ಲ. ಇದಾದ ಬಳಿಕ ತಡರಾತ್ರಿ 12.30 ರ ಸುಮಾರಿಗೆ ಮಾವೋವಾದಿಗಳು ಟ್ರ್ಯಾಕ್ ಅನ್ನು ಸ್ಫೋಟಿಸಿದ್ದಾರೆ. ರೈಲ್ವೆ ಹಳಿಗಳನ್ನು ಸ್ಫೋಟಿಸಿದ ನಂತರ, ಹೌರಾ - ಮುಂಬೈ ಮುಖ್ಯ ಮಾರ್ಗದ ಕಾರ್ಯಾಚರಣೆಗಳು ಶುಕ್ರವಾರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.