ಕಿನ್ನೌರ್: ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಇಂದು ಸಾಂಗ್ಲಾ-ಚಿಟ್ಕುಲ್ ರಸ್ತೆಯ ಬಟ್ಸೆರಿ ಬಳಿ ಭೂಕುಸಿತ ಸಂಭವಿಸಿದೆ. ದುರ್ಘಟನೆಯಲ್ಲಿ 9 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಭೂ ಕುಸಿತದ ಭಯಾನಕ ವಿಡಿಯೋದಲ್ಲಿ, ದೊಡ್ಡ ದೊಡ್ಡ ಬಂಡೆಗಲ್ಲುಗಳು ಪರ್ವತದಿಂದ ಉರುಳಿ ಬರುತ್ತಿರುವುದನ್ನು ಕಾಣಬಹುದು. ಬಂಡೆಯೊಂದು ಉರುಳಿಬಂದು ಸೇತುವೆಯ ಮೇಲೆ ಬಿದ್ದ ಪರಿಣಾಮ ಸೇತುವೆಯ ಒಂದು ಭಾಗ ಸಂಪೂರ್ಣ ಧ್ವಂಸಗೊಂಡಿದೆ.
ಕಿನ್ನೌರ್ ಜಿಲ್ಲೆಯ ಬಟ್ಸೆರಿಯಲ್ಲಿ ಬೆಟ್ಟದಿಂದ ಬಂಡೆಗಲ್ಲುಗಳು ಉರುಳಿ ಬಿದ್ದಿದ್ದು, ಬಟ್ಸೆರಿ ಗ್ರಾಮವನ್ನು ಸಂಪರ್ಕಿಸುವ ಸೇತುವೆ ಹಾನಿಗೊಳಗಾಗಿದೆ. ಇದಲ್ಲದೆ ದೊಡ್ಡ ವಾಹನಕ್ಕೂ ಹಾನಿಯಾಗಿದೆ.
ಸಾಂಗ್ಲಾ ಪೊಲೀಸ್ ಠಾಣೆಯ ಪ್ರಕಾರ, ಬಟ್ಸೆರಿಯ ಬೆಟ್ಟಗಳಿಂದ ಬಂಡೆಗಳು ಉರುಳಿ ಬಿದ್ದವು. ಈ ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ವೈದ್ಯರ ತಂಡ ಸ್ಥಳದಲ್ಲಿಯೇ ಬೀಡು ಬಿಟ್ಟಿದೆ.
9 ಪ್ರವಾಸಿಗರು ಬಲಿ, ಇಬ್ಬರಿಗೆ ಗಾಯ 11 ಜನರಿದ್ದ ಟೆಂಪೊ ಟ್ರಾವೆಲರ್ ಮೇಲೆ ಬೃಹತ್ ಬಂಡೆಗಳು ಬಿದ್ದಿವೆ. ಅವರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿಯ ಘಟನೆಯಲ್ಲಿ, ಕಿನ್ನೌರ್ ಜಿಲ್ಲೆಯ ಮತ್ತೊಂದು ಭೂಕುಸಿತದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ.
ಭಾರೀ ಮಳೆಯ ಕಾರಣದಿಂದ ಹವಾಮಾನ ಇಲಾಖೆ ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಎಚ್ಚರಿಕೆ ನೀಡಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಕಣಿವೆ ರಾಜ್ಯದಲ್ಲಿ ಭೂಕುಸಿತ ಸಾಮಾನ್ಯವೆಂಬಂತೆ ನಡೆಯುತ್ತಿದೆ.
ಮೃತರ ಕುಟುಂಬಕ್ಕೆ ಕೇಂದ್ರದ ಪರಿಹಾರ:
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಟ್ವಿಟರ್ ಖಾತೆಯಲ್ಲಿ ದುರ್ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂಓದಿ: ಮಹಾಬಲೀಪುರಂನಲ್ಲಿ ಭೀಕರ ಅಪಘಾತ: ನಟಿ ಯಶಿಕಾ ಆನಂದ್ ಆರೋಗ್ಯ ಸ್ಥಿತಿ ಗಂಭೀರ