ಭರತ್ಪುರ(ರಾಜಸ್ಥಾನ):ಕಳೆದ ಮೂರು ವರ್ಷಗಳಲ್ಲಿ ರಾಜಸ್ಥಾನದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, 14 ಹುಲಿಗಳು ಮತ್ತು ಒಂಬತ್ತು ಮರಿಗಳು ಕಣ್ಮರೆಯಾಗಿವೆ. ಅರಣ್ಯ ಇಲಾಖೆಯವರು ಹುಲಿಗಳ ಸಂರಕ್ಷಣೆಗೆ ಕಾವಲು ಕಾಯುತ್ತಿದ್ದರೂ ಹಲವಾರು ಹುಲಿಗಳು ಮಾಯವಾಗುತ್ತಿವೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿಂದ ನಾಪತ್ತೆ?: ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದಿಂದ ಗರಿಷ್ಠ ಸಂಖ್ಯೆಯ ಹುಲಿಗಳು ನಾಪತ್ತೆಯಾಗಿವೆ. ಇವುಗಳ ಪೈಕಿ ರಣಥಂಬೋರ್ ಕೋರ್ ಪ್ರದೇಶದ 9 ಹುಲಿಗಳು, ರಣಥಂಬೋರ್ ಬಫರ್ ವಲಯದಿಂದ 2 ಹುಲಿಗಳು ಮತ್ತು ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಹೊರಗಿನ ಕೈಲಾದೇವಿ ಪ್ರದೇಶದಿಂದ 2 ಹುಲಿಗಳು ನಾಪತ್ತೆಯಾಗಿವೆ. ಅದರ ಜೊತೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮುಕುಂದರ ಬೆಟ್ಟದಿಂದ ಕೂಡ ಒಂದು ಹುಲಿ ಕಾಣೆಯಾಗಿದೆ.
ಅಧಿಕಾರಿಗಳು ಹೇಳುವುದೇನು?: ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಡಿಎಫ್ಒ ಸಂಗ್ರಾಮ್ ಸಿಂಗ್ ಮಾತನಾಡಿ, 'ಹುಲಿಗಳು ಕಣ್ಮರೆಯಾಗಲು ಹಲವು ಕಾರಣಗಳಿವೆ. ಇಲ್ಲಿ ಕೆಲವು ಹುಲಿಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯವಿರುವ ಹುಲಿಗಳಿವೆ. ಸಾಮರ್ಥ್ಯ ಕಡಿಮೆ ಇರುವಂತವು ತಮ್ಮದೇ ಒಂದು ವಲಯವನ್ನು ಸ್ಥಾಪಿಸಲು ಸಾಧ್ಯವಾಗದೇ ಕಾಡಿನಿಂದ ಹೊರ ಹೋಗಿರುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ ಆ ಹುಲಿಗಳನ್ನು ಪತ್ತೆ ಹಚ್ಚಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಅರಣ್ಯದಲ್ಲಿ ಸಿಬ್ಬಂದಿಗೆ ತಲುಪಲು ಸಾಧ್ಯವಾಗದಂತಹ ಹಲವು ಪ್ರದೇಶಗಳಿವೆ. ಅಂತಹ ಜಾಗಗಳಲ್ಲಿ ಹುಲಿಗಳಿದ್ದರೆ ಅವುಗಳನ್ನು ಪತ್ತೆ ಹಚ್ಚುವುದು ಕಷ್ಟ. ಆಗ ಹುಲಿ ಕಣ್ಮರೆಯಾಗಿದೆ ಎಂದು ಪರಿಗಣಿಸಲಾಗುತ್ತದೆ' ಎಂದರು.
'ದಟ್ಟ ಕಾಡಿನಲ್ಲಿ ಹುಲಿಗಳು ಸ್ವಾಭಾವಿಕವಾಗಿ ಸಾವನ್ನಪ್ಪಿದರೆ ಅವುಗಳ ದೇಹವನ್ನು ಕೆಲವೇ ದಿನಗಳಲ್ಲಿ ಇತರ ಕಾಡುಪ್ರಾಣಿಗಳು ಮತ್ತು ಕೀಟಗಳು ತಿಂದು ಬಿಡುತ್ತವೆ. ಕೆಲವೊಮ್ಮೆ ಹುಲಿಗಳು ಸಾವನ್ನಪ್ಪಿರುವುದಕ್ಕೆ ಯಾವುದೇ ಪುರಾವೆಗಳೂ ದೊರೆಯದಂತೆ ದೇಹವನ್ನು ಖಾಲಿ ಮಾಡಿರುತ್ತವೆ. ಈಗ ನಾಪತ್ತೆಯಾಗಿರುವ ಹುಲಿಗಳಿಗೆ ಬೇಟೆಯಾಡಿರುವ ಕುರುಹುಗಳೂ ಪತ್ತೆಯಾಗಿಲ್ಲ' ಎಂದು ಹೇಳಿದರು.