ನವದೆಹಲಿ: ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ಸೇರಿದಂತೆ ಭಾರತದ ಒಂಬತ್ತು ರಾಜ್ಯಗಳು ತಮ್ಮಲ್ಲಿನ ಮಾನವ ನಿರ್ಮಿತ ಪರಿಸರಕ್ಕೆ ಹವಾಮಾನ ಬದಲಾವಣೆಯ ಕಾರಣಗಳಿಂದ ಹಾನಿ ಸಂಭವಿಸುವ ಸಾಧ್ಯತೆ ಇರುವ ವಿಶ್ವದ ಅಗ್ರ 50 ಪ್ರದೇಶಗಳಲ್ಲಿ ಸೇರಿವೆ ಎಂದು ಸೋಮವಾರ ಪ್ರಕಟವಾದ ಹೊಸ ವರದಿಯೊಂದು ತಿಳಿಸಿದೆ. ಈ ವರದಿ ನೀಡಿದ ಕ್ರಾಸ್ ಡಿಪೆಂಡೆನ್ಸಿ ಇನಿಶಿಯೇಟಿವ್ (XDI) ಹೆಸರಿನ ಸಂಸ್ಥೆಯು ಹವಾಮಾನ ಬದಲಾವಣೆಯ ವೆಚ್ಚಗಳನ್ನು ಪ್ರಮಾಣೀಕರಿಸಲು ಮತ್ತು ಸಂವಹನ ಮಾಡಲು ಬದ್ಧವಾಗಿರುವ ಕಂಪನಿಗಳ ಗುಂಪಿನ ಭಾಗವಾಗಿದೆ. 2050 ರಲ್ಲಿ ಪ್ರಪಂಚದಾದ್ಯಂತ 2,600 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ನಿರ್ಮಿತ ಪರಿಸರಕ್ಕೆ ಭೌತಿಕ ಹವಾಮಾನದ ಅಪಾಯವನ್ನು ಈ ಸಂಸ್ಥೆಯು ಲೆಕ್ಕಾಚಾರ ಮಾಡಿದೆ.
ನಿರ್ಮಿತ ಪರಿಸರ ಎಂದರೆ ಮನೆಗಳು ಮತ್ತು ಕೆಲಸದ ಸ್ಥಳಗಳಂತಹ ಮಾನವ ಚಟುವಟಿಕೆಯನ್ನು ಬೆಂಬಲಿಸಲು ಮನುಷ್ಯ ತಾನೇ ನಿರ್ಮಿಸಿದ ನಮ್ಮ ಸುತ್ತಮುತ್ತಲಿನ ಘಟಕಗಳನ್ನು ಸೂಚಿಸುತ್ತದೆ. XDI ಗ್ರಾಸ್ ಡೊಮೆಸ್ಟಿಕ್ ಕ್ಲೈಮೇಟ್ ರಿಸ್ಕ್ ಡೇಟಾ ಸೆಟ್ ಈ ಪ್ರದೇಶಗಳನ್ನು ಹವಾಮಾನ ವೈಪರೀತ್ಯ ಮತ್ತು ಪ್ರವಾಹ, ಕಾಡಿನ ಬೆಂಕಿ, ಶಾಖದ ಅಲೆ ಮತ್ತು ಸಮುದ್ರ ಮಟ್ಟ ಏರಿಕೆಯಂತಹ ಹವಾಮಾನ ಬದಲಾವಣೆಯಿಂದ ಕಟ್ಟಡಗಳು ಮತ್ತು ಆಸ್ತಿಗಳಿಗೆ ಹಾನಿಯ ಮಾದರಿಯ ಪ್ರಕ್ಷೇಪಗಳ ಅನುಸಾರ ಹೋಲಿಸಿದೆ.
ಈ ವಲಯದಲ್ಲಿ 2050 ರಲ್ಲಿ ಅಗ್ರ 200 ರಲ್ಲಿ ಅರ್ಧಕ್ಕಿಂತ ಹೆಚ್ಚು (114) ಅಪಾಯದಲ್ಲಿರುವ ಪ್ರಾಂತ್ಯಗಳನ್ನು ಹೊಂದುವ ಮೂಲಕ ಪಟ್ಟಿಯಲ್ಲಿ ಏಷ್ಯಾ ಪ್ರಾಬಲ್ಯ ಹೊಂದಿದೆ. ಇದರಲ್ಲಿ ಚೀನಾ ಮತ್ತು ಭಾರತಗಳನ್ನು ವಿಶೇಷವಾಗಿ ಹೆಸರಿಸಲಾಗಿದೆ. ಹಾಗಂತ ಪಟ್ಟಿಯಲ್ಲಿಲ್ಲದ ಘಟಕಗಳು ಕಡಿಮೆ ಅಪಾಯವನ್ನು ಹೊಂದಿಲ್ಲ ಎಂದು XDI ಹೇಳಿದ್ದು, ಹವಾಮಾನ ವೈಪರೀತ್ಯದ ಅಪಾಯಗಳಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ಅನೇಕ ರಾಜ್ಯಗಳು ಮತ್ತು ಪ್ರಾಂತ್ಯಗಳು ತಮ್ಮ ಕಡಿಮೆ ಸಂಖ್ಯೆಯ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳ ಕಾರಣದಿಂದಾಗಿ ಈ ಶ್ರೇಯಾಂಕದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದೆ.