ಶಿರಡಿ (ಮಹಾರಾಷ್ಟ್ರ):ಪ್ರಸಿದ್ಧ ಧಾರ್ಮಿಕ ಕೇತ್ರ ಶಿರಡಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಾಸಿಕ್ ಹೆದ್ದಾರಿಯ ಪಥರೆ ಬಳಿಯ ಇಶಾನೇಶ್ವರ ದೇವಸ್ಥಾನದ ಕಮಾನು ಬಳಿ ಇಂದು ಬೆಳಗ್ಗೆ ಯಾತ್ರಿಕರಿದ್ದ ಖಾಸಗಿ ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಸುಮಾರು 10ಕ್ಕೂ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಏಳು ಮಂದಿ ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಓರ್ವ ಪುರುಷ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ನಲ್ಲಿ ಶಿರಡಿಗೆ ತೆರಳುತ್ತಿದ್ದ ಭಕ್ತರು:ಮುಂಬೈನಿಂದ ಶಿರಡಿಗೆ ಬರುತ್ತಿದ್ದ ಖಾಸಗಿ ಕಂಫರ್ಟ್ ಬಸ್ ಸಂಖ್ಯೆ MH04 SK 2751 ಮತ್ತು ಶಿರಡಿಬಾಜು ಕಡೆಯಿಂದ ಸಿನ್ನಾರ್ ಬಾಜು ಕಡೆಗೆ ಹೋಗುತ್ತಿದ್ದ ಸರಕು ಸಾಗಣೆ ಟ್ರಕ್ ಸಂಖ್ಯೆ MH48T 1295 ನಡುವೆ ಅಪಘಾತ ಉಂಟಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ನೆಲಕ್ಕುರುಳಿದೆ. ಟ್ರಕ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಖಾಸಗಿ ಬಸ್‌ನಲ್ಲಿ ಅಂಬರನಾಥ ಥಾಣೆಯಿಂದ ಸುಮಾರು 50 ಮಂದಿ ಪ್ರಯಾಣಿಕರು ಶಿರಡಿ ಸಾಯಿಬಾಬ ದರ್ಶನಕ್ಕೆ ತೆರಳುತ್ತಿದ್ದರು. ಆದ್ರೆ ಬಸ್ ಇಶಾನೇಶ್ವರ ದೇವಸ್ಥಾನದ ಕಮಾನು ತಲುಪುತ್ತಿದ್ದಂತೆಯೇ ದುರಂತ ಘಟಿಸಿದೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯ:ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮೃತದೇಹಗಳನ್ನು ಬಸ್ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಸಿನ್ನಾರ್ ಗ್ರಾಮಾಂತರ ಆಸ್ಪತ್ರೆ ಮತ್ತು ಯಶವಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಪೊಲೀಸರು ಮೃತಪಟ್ಟ ಸಂಬಂಧಿಕರ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.