ಢಾಕಾ/ನವದೆಹಲಿ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಸಿತ್ರಾಂಗ್ ಚಂಡಮಾರುತ ಸೋಮವಾರ ಬೆಳಗ್ಗೆ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಿದೆ. ಕರಾವಳಿಗೆ ಅಪ್ಪಳಿಸಿದ ಚಂಡಮಾರುತವು ಹಲವೆಡೆ ವಿನಾಶ ತಂದಿದೆ. ಕೆಲವೆಡೆ ಮನೆಗಳಿಗೆ ಹಾನಿಯಾಗಿದ್ದರೆ, ಮರ ಬಿದ್ದು ಒಂದೇ ಕುಟುಂಬದ ಮೂವರು ಸೇರಿದಂತೆ ಕನಿಷ್ಠ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ, ಅಧಿಕಾರಿಗಳು ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ:ಸ್ಥಳೀಯ ಮಾಧ್ಯಮಗಳ ಪ್ರಕಾರ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಬರ್ಗುನಾ, ನರೈಲ್, ಸಿರಾಜ್‌ಗಂಜ್ ಜಿಲ್ಲೆಗಳು ಮತ್ತು ಭೋಲಾ ದ್ವೀಪ ಜಿಲ್ಲೆಗಳು ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾಗಿವೆ. ಕಾಕ್ಸ್ ಬಜಾರ್ ಕರಾವಳಿಯಿಂದ ಸಾವಿರಾರು ಜನರು ಮತ್ತು ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ಸಚಿವಾಲಯದ ನಿಯಂತ್ರಣ ಕೊಠಡಿಯ ವಕ್ತಾರರು ತಿಳಿಸಿದ್ದಾರೆ.
28 ಸಾವಿರಕ್ಕೂ ಹೆಚ್ಚು ಜನರ ರಕ್ಷಣೆ:ಕಾಕ್ಸ್ ಬಜಾರ್ ಕರಾವಳಿಯಿಂದ ಕನಿಷ್ಠ 28,155 ಜನರು ಮತ್ತು 2,736 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಸೀತ್ರಾಂಗ್ ಚಂಡಮಾರುತ ಬಾಂಗ್ಲಾದೇಶಗೆ ಅಪ್ಪಳಿಸುವ ಮುನ್ನವೇ 576 ಶೆಲ್ಟರ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಢಾಕಾ ಮಾಧ್ಯಮಗಳು ವರದಿ ಮಾಡಿವೆ.