ತೆಲಂಗಾಣ/ಆಂಧ್ರಪ್ರದೇಶ:ಅವಳಿ ತೆಲುಗು ರಾಷ್ಟ್ರಗಳಲ್ಲಿ ನಡೆದ ಪ್ರತ್ಯೇಕ ದುರಂತಗಳಲ್ಲಿ ನಾಲ್ವರು ಮಕ್ಕಳು ಸೇರಿ 11 ಮಂದಿ ದುರ್ಮರಣಕ್ಕೀಡಾದ ಘಟನೆ ಇಂದು (ಸೋಮವಾರ) ನಡೆದಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು ಕಾರ್ಯಕ್ರಮವೊಂದಕ್ಕೆ ಹೊರಟಿದ್ದವರಲ್ಲಿ 7 ಮಂದಿ ಸಾವನ್ನಪ್ಪಿ, ಇನ್ನೂ 7 ಮಂದಿ ಗಾಯಗೊಂಡಿದ್ದಾರೆ. ಇತ್ತ ತೆಲಂಗಾಣದಲ್ಲಿ ಈಜಲು ಹೋದ ನಾಲ್ಕು ಬಾಲಕರು ಕೃಷ್ಣಾ ನದಿ ಪಾಲಾಗಿದ್ದಾರೆ.
ಮಗುಚಿ ಬಿದ್ದ ಟ್ರ್ಯಾಕ್ಟರ್:ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ವಟ್ಟಿಚೆರುಕೂರು ಬಳಿ ಟ್ರ್ಯಾಕ್ಟರ್ವೊಂದು ರಸ್ತೆ ಪಕ್ಕದ ಕಾಲುವೆಯಲ್ಲಿ ಪಲ್ಟಿಯಾಗಿದೆ. ದುರ್ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚೇಬ್ರೋಳು ಮಂಡಲದ ಜುಪುಡಿ ಎಂಬಲ್ಲಿಗೆ ಶುಭ ಕಾರ್ಯಕ್ಕೆಂದು ತೆರಳುತ್ತಿದ್ದಾಗ ಅಚಾನಕ್ಕಾಗಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೋರ್ವ ಮಹಿಳೆ ಗುಂಟೂರಿನ ಜಿಜಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.
ಮೃತರನ್ನು ನಾಗಮ್ಮ, ಮೇರಮ್ಮ, ರತ್ನಕುಮಾರಿ, ನಿರ್ಮಲಾ, ಸುಹಾಸಿನಿ, ಝಾನ್ಸಿರಾಣಿ ಮತ್ತು ಸಲೋಮಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೊಂಡೆಪಾಡು ಗ್ರಾಮದವರಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗುಂಟೂರಿನ ಜಿಜಿಎಚ್‌ಗೆ ರವಾನಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈಜಲು ಹೋಗಿ ನದಿ ಪಾಲು:ಇತ್ತ ತೆಲಂಗಾಣದಲ್ಲಿ ನಾಲ್ವರು ಬಾಲಕರನ್ನು ನದಿ ನೀರು ಆಪೋಷನ ಪಡೆದುಕೊಂಡಿದೆ. ಗದ್ವಾಲ್ ಜಿಲ್ಲೆಯ ಬೊರಿವಾಲಿ ಗ್ರಾಮದ ಇಮಾಮ್ ಎಂಬುವವರ ಮನೆಯಲ್ಲಿ ಶುಭ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕಾಗಿ ಕರ್ನೂಲಿನ ಇಬ್ರಾಹಿಂ ಮತ್ತು ಇಸ್ಮಾಯಿಲ್ ಎಂಬುವರ ಕುಟುಂಬಸ್ಥರು ಮನೆಗೆ ಬಂದಿದ್ದರು. ಎರಡೂ ಕುಟುಂಬಗಳ 11 ಬಾಲಕ- ಬಾಲಕಿಯರು ಮಂಗಮಪೇಟೆ ಗ್ರಾಮದಲ್ಲಿರುವ ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದರು.