ನೈನಿತಾಲ್(ಉತ್ತರಾಖಂಡ): ದೇವರ ನಾಡು ಕೇರಳದಲ್ಲಿ ಮಳೆಯಾರ್ಭಟ ಕಡಿಮೆಯಾಗುತ್ತಿದ್ದಂತೆ ಇದೀಗ ಉತ್ತರಾಖಂಡ ವರುಣನ ಅವಕೃಪೆಗೆ ತುತ್ತಾಗಿದ್ದು, ರಕ್ಕಸ ಮಳೆಗೆ ಈಗಾಗಲೇ 40 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಭೀಕರ ಮಳೆಯಿಂದಾಗಿ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಪ್ರಮುಖವಾಗಿ ಅನೇಕ ಮನೆಗಳು ಧರೆಗುರುಳಿದ್ದು, ಅನೇಕರು ಜೀವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸತತ ಮಳೆಯಿಂದಾಗಿ ಮೇಘ ಸ್ಫೋಟ ಹಾಗೂ ಭೂಕುಸಿತ ಉಂಟಾಗಿದ್ದು, ನೈನಿತಾಲ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ 10 ಜನರು ಸಾವಿಗೀಡಾಗಿದ್ದಾರೆ. ಅದರಲ್ಲಿ ಐವರು ಕಾರ್ಮಿಕರು ಸೇರಿಕೊಂಡಿದ್ದು, ಇಬ್ಬರು ಬಿಹಾರ ಹಾಗೂ ಮೂವರು ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದೆ.
ಪ್ರವಾಹ ಹಾಗೂ ಭೂಕುಸಿತದಿಂದಾಗಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬೇರೆ ಬೇರೆ ರಾಜ್ಯಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನೈನಿತಾಲ್ ಸಂಪರ್ಕ ಕಡಿತಗೊಂಡಿದೆ. ರಾಮಗಢದಲ್ಲಿ ಮನೆ ಕುಸಿದು ಐವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿರಿ:Watch:ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನದಿ, ತುಂಡು ಭೂಮಿಯಲ್ಲಿ ಸಿಲುಕಿದ ಗಜರಾಜ