ನಾಂದೇಡ್ (ಮಹಾರಾಷ್ಟ್ರ) :ಮಹಾರಾಷ್ಟ್ರದಲ್ಲಿ ಆರೋಗ್ಯ ಸೇವೆ ತೀವ್ರ ಕುಸಿತ ಕಾಣುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ. ಕೆಲ ದಿನಗಳ ಹಿಂದಷ್ಟೇ ಥಾಣೆಯ ಸರ್ಕಾರಿ ಆಸ್ಪತ್ರೆಯಲ್ಲಿ 12 ತಾಸಿನಲ್ಲಿ 17 ಮಂದಿ ಸಾವಿಗೀಡಾದ ಘಟನೆ ಸಂಚಲನ ಉಂಟು ಮಾಡಿತ್ತು. ಇದೀಗ ಅಂಥದ್ದೇ ಮತ್ತೊಂದು ದುರ್ಘಟನೆ ನಡೆದಿದ್ದು, ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾಂದೇಡ್ನ ಸರ್ಕಾರ ಆಸ್ಪತ್ರೆಯಲ್ಲಿ ಭಾನುವಾರದಿಂದ ಸೋಮವಾರದೊಳಗೆ 24 ಗಂಟೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಹನ್ನೆರಡು ಹಸುಗೂಸುಗಳು ಸೇರಿದಂತೆ 24 ಮಂದಿ ಸಾವಿಗೀಡಾಗಿದ್ದಾರೆ. ವೈದ್ಯರು ಮತ್ತು ಆಸ್ಪತ್ರೆಯ ಕೊರತೆಯಿಂದಾಗಿ ಈ ದುರಂತ ಸಂಭವಿಸಿದೆ. 12 ರೋಗಿಗಳು ವಿವಿಧ ಕಾಯಿಲೆ ಮತ್ತು ಹಾವು ಕಡಿತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಡೀನ್ ಶ್ಯಾಮ್ ರಾವ್ ವಾಕೋಡೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವುದರಿಂದ ರೋಗಿಗಳಿಗೆ ಸೇವೆ ನೀಡಲು ತೀವ್ರ ತೊಂದರೆಯಾಗುತ್ತಿದೆ. ಬಜೆಟ್ನಲ್ಲಿ ಸಾಕಷ್ಟು ಹಣ ಮೀಸಲಿಡದ ಕಾರಣ ಔಷಧ ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಸೇವಾ ವೈದ್ಯರು ಮತ್ತು ಔಷಧಿಯ ಕೊರತೆ ಉಂಟಾಗಿದೆ. ನಾಂದೇಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ದೊಡ್ಡ ಆಸ್ಪತ್ರೆ ಇದಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಇರುವ ಸೌಲಭ್ಯಗಳು ಸಾಕಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಡಿ:ಈ ವಿಚಾರ ಹೊರಬೀಳುತ್ತಿದ್ದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿವೆ. ಮೂರು ಇಂಜಿನ್‌ಗಳು (ಬಿಜೆಪಿ, ಏಕನಾಥ್ ಶಿಂಧೆ- ಶಿವಸೇನೆ, ಎನ್‌ಸಿಪಿ -ಅಜಿತ್ ಬಣ) ಈ ಸಾವುಗಳಿಗೆ ಹೊಣೆಯಾಗಿವೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲಾಗದೇ ಜನರ ಜೀವದ ಜೊತೆಗೆ ಸರ್ಕಾರ ಆಟವಾಡುತ್ತಿದೆ ಎಂದು ಆರೋಪಿಸಿವೆ.