ಶ್ರಾವಸ್ತಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಇಕೌನಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಕೌನಾ ಪೊಲೀಸ್ ಠಾಣೆಯ ಉಸ್ತುವಾರಿ ಮಹಿಮಾ ನಾಥ್ ಉಪಾಧ್ಯಾಯ ನೀಡಿರುವ ಮಾಹಿತಿ ಪ್ರಕಾರ, "ಕಾರಿನಲ್ಲಿದ್ದವರು ಬಲರಾಮ್ಪುರದಿಂದ ನೇಪಾಳದ ನೇಪಾಲ್ಗಂಜ್ ಪ್ರದೇಶಕ್ಕೆ ಹೋಗುತ್ತಿದ್ದರು. ಈ ವೇಳೆ ರಸ್ತೆ ಮಧ್ಯ ಬಂದ ದನವನ್ನು ಉಳಿಸಲು ಕಾರು ಚಾಲಕ ಪ್ರಯತ್ನಿಸಿದ್ದಾನೆ. ಆಗ ವಾಹನ ನಿಯಂತ್ರಣ ತಪ್ಪಿ ಬಹ್ರೇಚ್ ಬಲರಾಮ್ಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
ಸಾವನ್ನಪ್ಪಿದ್ದವರಲ್ಲಿ ನೇಪಾಳದ ನಿವಾಸಿಗಳಾದ 18 ವರ್ಷದ ನೀತಿ, 30 ವರ್ಷದ ನಿಲನ್ಶ್ ಮತ್ತು ವೈಭವ್ ಗುಪ್ತಾ ಸೇರಿದ್ದಾರೆ. ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಾರು ಚಾಲಕನ ಸ್ಥಿತಿ ತೀರಾ ಗಂಭೀರವಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂತಹದ್ದೇ ಮತ್ತೊಂದು ಭೀಕರ ಅಪಘಾತ ಶುಕ್ರವಾರ ಸಂಭವಿಸಿತ್ತು. ಉತ್ತರ ಪ್ರದೇಶದ ಸಹಾಪೌ ಕೊಟ್ವಾಲಿ ಪ್ರದೇಶದ ಸದಾಬಾದ್ ರಸ್ತೆಯಲ್ಲಿ ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಟ್ರ್ಯಾಕ್ಟರ್ ಟ್ರಾಲಿ ಮತ್ತು ಡಂಪರ್ ಮುಖಾಮುಖಿ ಡಿಕ್ಕಿಯಾಗಿ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದರು.