ಮುಂಬೈ:ಶ್ರದ್ಧಾ ಕೊಲೆ ಪ್ರಕರಣ ದಿಂದ ಸ್ಫೂರ್ತಿ ಪಡೆದು ಸರಸ್ವತಿ ವೈದ್ಯರ ದೇಹವನ್ನು ತುಂಡರಿಸಿರುವುದಾಗಿ ಆರೋಪಿ ಮನೋಜ್ ಸಾನೆ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ವರದಿಯಾಗಿದೆ. ಬುಧವಾರ ಮುಂಬೈನ ಮೀರಾ ರೋಡ್ ಪ್ರದೇಶದಲ್ಲಿ ನಡೆದ ಸರಸ್ವತಿ ವೈದ್ಯ ಕೊಲೆ ಪ್ರಕರಣ ಇಡೀ ನಗರವನ್ನೆ ಬೆಚ್ಚಿ ಬೀಳಿಸಿತ್ತು.
ಘಟನೆ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇದೀಗ ಆರೋಪಿ ಮನೋಜ್, ವಿಚಾರಣೆ ವೇಳೆ ಕೊಲೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ಜೂನ್ 3 ರಂದು ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ತನ್ನ ಮೇಲೆ ಕೊಲೆ ಆರೋಪ ಬರುತ್ತದೆ ಎಂಬ ಭಯದಿಂದ ದೇಹವನ್ನು ತುಂಡರಿಸಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ ಶವವನ್ನು ವಿಲೇವಾರಿ ಮಾಡಿರುವುದಾಗಿ ಆರೋಪಿ ಮನೋಜ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಿಂದ ಸ್ಫೂರ್ತಿ ಪಡೆದು ದೇಹವನ್ನು ತುಂಡರಿಸಿದ್ದಾಗಿಯೂ ಆರೋಪಿ ಹೇಳಿದ್ದಾನಂತೆ.
ಮನೋಜ್ ಹೇಳಿಕೆಯಿಂದ ಪೊಲೀಸರು ಸರಸ್ವತಿ ಅವರದ್ದು ಆತ್ಮಹತ್ಯೆಯ ಅಥವಾ ಕೊಲೆಯೋ ಎಂದು ತನಿಖೆ ನಡೆಸುತ್ತಿದ್ದಾರೆ. ಗುರುವಾರದಂದು ಸರಸ್ವತಿ ಅವರನ್ನು ಕೊಂದು ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಸಾನೆ ಪ್ರಯತ್ನಿಸಿದ್ದ. ಇದೀಗ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಮಗ್ರ ತನಿಖೆಯ ನಂತರವೇ ಸತ್ಯಾಂಶ ಹೊರ ಬರಬೇಕಿದೆ.
ಮನೆಯಲ್ಲಿ ಪತ್ತೆಯಾದ ಮೃತ ಸರಸ್ವತಿ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಮನೋಜ್ ಆತ್ಮಹತ್ಯೆ ಹೇಳಿಕೆ ಬಗ್ಗೆ ಅನುಮಾನವಿದೆ. ಅಲ್ಲದೇ ಅಪರಾಧದ ಹಿಂದಿನ ಉದ್ದೇಶವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಠಾಣೆಗೆ ಭೇಟಿ ನೀಡಿದ ಕೊಲೆಯಾದ ಮಹಿಳೆ ಸಹೋದರಿ:ಇನ್ನೊಂದೆಡೆ ಸರಸ್ವತಿ ವೈದ್ಯ ಅವರ ಸಹೋದರಿ ಸಹ ಇಂದು ನಯಾ ನಗರ ಪೊಲೀಸ್ ಠಾಣೆಗೆ ಬಂದಿದ್ದರು. ಇದೇ ವೇಳೆ, ಮನೋಜ್ ಸಾನೆ ಅವರನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಈ ವೇಳೆ ಆರೋಪಿಯನ್ನು ನಯಾ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದರು.
ಪ್ರಕರಣದ ಹಿನ್ನೆಲೆ:ಜೂ.4 ಬುಧವಾರದಂದು ರಾತ್ರಿ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ಕಟ್ಟಡವೊಂದರ ಹಲವಾರು ತುಂಡುಗಳಾಗಿ ಕತ್ತರಿಸಿದ 36 ವರ್ಷದ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಸರಸ್ವತಿ ವೈದ್ಯ ಕೊಲೆಯಾದ ಮಹಿಳೆ ಎಂದು ಪೊಲೀಸರು ಗುರುತಿಸಿದ್ದರು. ಮೃತರು 56 ವರ್ಷದ ಮನೋಜ್ ಸಹಾನಿ ಅವರೊಂದಿಗೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಮೀರಾ ಭಾಯಂದರ್ ಪ್ರದೇಶದ ಫ್ಲಾಟ್‌ನಲ್ಲಿ ನೆಲೆಸಿದ್ದರು. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಪಾರ್ಟ್‌ಮೆಂಟ್‌ನಲ್ಲಿದ್ದ ನೆರೆಹೊರೆಯವರು ನಯಾ ನಗರ ಠಾಣೆಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ:ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯನ್ನ 13 ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಕ್ರೂರಿ