ನವ ದೆಹಲಿ:ಚಂದ್ರಯಾನ-3 ಯೋಜನೆಯ ಯಶಸ್ಸು 'ನವ ಭಾರತದ ಚೈತನ್ಯದ ಸಂಕೇತ' ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇಂದು ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನ 104ನೇ ಸಂಚಿಕೆ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಯಶಸ್ವಿ ಚಂದ್ರಯಾನದಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಜನೆಯ ಯಶಸ್ಸಿನೊಂದಿಗೆ ಭಾರತ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿನಲ್ಲಿ ಅನೇಕ ಮಹಿಳಾ ವಿಜ್ಞಾನಿಗಳು ಭಾಗಿಯಾಗಿರುವುದು ಸಂತಸದ ಸಂಗತಿ ಎಂದರು.
ಇದೇ ವೇಳೆ, ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿ ದೇಶದ ಜನರಿಗೆ ಶುಭ ಕೋರಿದ ಮೋದಿ, ಸಂಸ್ಕೃತ ವಿಜ್ಞಾನ ಮತ್ತು ವ್ಯಾಕರಣಕ್ಕೆ ಹೆಸರುವಾಸಿಯಾಗಿದೆ. ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪ್ರಾಚೀನ ಭಾಷೆ ಉತ್ತೇಜಿಸುವ ಅಗತ್ಯವಿದೆ. ಸಂಸ್ಕೃತ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಜತೆಗೆ ದೇಶಪ್ರೇಮದ ಮನೋಭಾವ ಕೂಡ ಉತ್ತುಂಗದಲ್ಲಿದೆ ಎಂದು ತಿಳಿಸಿದರು. ರಾಷ್ಟ್ರದ ವೈವಿಧ್ಯತೆಯನ್ನು ಅನ್ವೇಷಿಸಲು ಜನರಿಗೆ ಕರೆ ನೀಡಿದ ಪ್ರಧಾನಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ತೊಡಗಿರುವ ಎಲ್ಲರನ್ನೂ ಶ್ಲಾಘಿಸಿದರು.
ಪ್ರಧಾನಿ ಮಾಸಿಕ ರೇಡಿಯೋ ಕಾರ್ಯಕ್ರಮದ ಪ್ರಸಾರ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಿತ್ತು. ಇದಕ್ಕೂ ಮೊದಲು ಪ್ರಧಾನಿ ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) "ಭಾನುವಾರ ಬೆಳಗ್ಗೆ 11 ಗಂಟೆಗೆ 'ಮನ್ ಕಿ ಬಾತ್' ಕೇಳಿ. ಭಾರತದಾದ್ಯಂತ ಸ್ಪೂರ್ತಿದಾಯಕ ಜೀವನ ಪ್ರಯಾಣಗಳ ಬಗ್ಗೆ ಮಾತನಾಡಲು ನನಗೆ ಯಾವಾಗಲೂ ಸಂತೋಷವಾಗುತ್ತದೆ" ಎಂದು ಹೇಳಿದ್ದರು.
ಮೋದಿ ಮನ್ ಕಿ ಬಾತ್‌ನಲ್ಲಿ ಹೇಳಿದ್ದು..:
- ಮಿಷನ್ ಚಂದ್ರಯಾನ ನವ ಭಾರತದ ಆತ್ಮದ ಸಂಕೇತ.
- ದೇಶಭಕ್ತಿ ಮನೋಭಾವ ಮೂಡಿಸುವ 'ನನ್ನ ಮಣ್ಣು, ನನ್ನ ದೇಶ' ಅಭಿಯಾನ ಭರದಿಂದ ಸಾಗುತ್ತಿದೆ.
- ಮೇಘಾಲಯದ ಬ್ರಿಯಾನ್ ಡಿ. ಖಾರ್ಪ್ರಾನ್ ಅವರು ಸ್ಪೀಲಿಯಾಲಜಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅವರು ತಮ್ಮ ತಂಡದೊಂದಿಗೆ 1,700ಕ್ಕೂ ಹೆಚ್ಚು ಗುಹೆಗಳನ್ನು ಪತ್ತೆ ಮಾಡಿದ್ದಾರೆ.
- ಬೆಂಗಳೂರಿನ ಧನಪಾಲ್ ಅವರ ಪರಂಪರೆಯ ಬಗ್ಗೆ ಕಲಿಯುವ ಉತ್ಸಾಹ ಶ್ಲಾಘನೀಯ.
- ನಾವು ನಮ್ಮ ಮಾತೃಭಾಷೆಯೊಂದಿಗೆ ಸಂಪರ್ಕ ಹೊಂದಿದಾಗ, ಸಹಜವಾಗಿ ನಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದುತ್ತೇವೆ.
- ಸಂಸ್ಕೃತವು ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು. ಇಂದು ಜನರು ಯೋಗ, ಆಯುರ್ವೇದ ಮತ್ತು ತತ್ವಶಾಸ್ತ್ರದಂತಹ ವಿಷಯಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವುದನ್ನು ನೋಡಿ ಸಂತೋಷವಾಗಿದೆ.
- ಆಗಸ್ಟ್ 29 ಅನ್ನು 'ತೆಲುಗು ದಿವಸ್' ಎಂದು ಆಚರಿಸಲಾಗುವುದು.
- 'ಸಬ್ಕಾ ಪ್ರಯಾಸ್'ನೊಂದಿಗೆ, 'ಹರ್ ಘರ್ ತಿರಂಗಾ' ಅಭಿಯಾನ ಅದ್ಭುತ ಯಶಸ್ಸು ಕಂಡಿದೆ.
- ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
- ನಮ್ಮ ಯುವಕರು ಕ್ರೀಡೆಯಲ್ಲಿ ಹೊಸ ಯಶಸ್ಸನ್ನು ಸಾಧಿಸುತ್ತಿದ್ದಾರೆ. ಚೀನಾದಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ದಾಖಲೆ ಸಂಖ್ಯೆಯ ಪದಕಗಳನ್ನು ಗೆದ್ದಿದ್ದಾರೆ.
- "1959ರಿಂದ ನಡೆದ ಎಲ್ಲಾ ವಿಶ್ವ ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳಲ್ಲಿ ನಾವು ಗೆದ್ದ ಎಲ್ಲಾ ಪದಕಗಳನ್ನು ಸೇರಿಸಿದರೂ, ಇವುಗಳ ಸಂಖ್ಯೆ ಕೇವಲ 18 ಇತ್ತು. ಆದರೆ ಈ ಬಾರಿ ನಮ್ಮ ಕ್ರೀಡಾಪಟುಗಳು 26 ಪದಕಗಳನ್ನು ಗೆದ್ದಿದ್ದಾರೆ.
- ಜಿ-20 ನಾಯಕರ ಶೃಂಗಸಭೆಗೆ ಭಾರತ ಸಿದ್ಧವಾಗಿದೆ.
- ಭಾರತದ ಮಿಷನ್ ಚಂದ್ರಯಾನವು ಮಹಿಳಾ ಶಕ್ತಿಯ ನೇರ ಉದಾಹರಣೆಯಾಗಿದೆ. ಅನೇಕ ಮಹಿಳಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ.
- ಮಿಷನ್ ಚಂದ್ರಯಾನವು ನವ ಭಾರತದ ಚೈತನ್ಯ ಹಾಗೂ ವಿಜಯದ ಸಂಕೇತವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಧೃತಿಗೆಡದೆ ಹೇಗೆ ಗೆಲ್ಲಬೇಕೆಂದು ಎಂಬುದನ್ನು ಸಾಬೀತುಪಡಿಸಿದೆ.
- ಭವಿಷ್ಯದಲ್ಲಿ ನಮ್ಮ ಬಾಹ್ಯಾಕಾಶ ಕ್ಷೇತ್ರವು ಹೆಚ್ಚಿನ ಯಶಸ್ಸು ಸಾಧಿಸುತ್ತದೆ ಎಂಬುದು ನನ್ನ ಅಭಿಪ್ರಾಯ.
ಮನ್ ಕಿ ಬಾತ್ ಮೊದಲ ಸಂಚಿಕೆ 2014ರಲ್ಲಿ ಪ್ರಸಾರವಾಗಿತ್ತು. ಏಪ್ರಿಲ್ 30, 2023ರಂದು 100 ಸಂಚಿಕೆಗಳನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ:ಇಂದು 11 ಗಂಟೆಗೆ ಪ್ರಧಾನಿ ಮೋದಿ 'ಮನ್ ಕಿ ಬಾತ್' 104ನೇ ಸಂಚಿಕೆ ಪ್ರಸಾರ