ತಿರುವನಂತಪುರಂ: ಕೇರಳದ ವೆಂಬನಾಡ್ ಕೆರೆಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ, ಕೆರೆ ಸ್ವಚ್ಛತೆಗೆ ಪ್ರತಿದಿನ ಶ್ರಮಿಸುತ್ತಿರುವ ವಿಶೇಷ ಚೇತನ ವ್ಯಕ್ತಿ ರಾಜಪ್ಪ ಎಂಬುವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ಸ್ಮರಿಸಿದ್ದಾರೆ.
ಇದೀಗ ಎನ್.ಎಸ್. ರಾಜಪ್ಪರ ಕಾರ್ಯಕ್ಕೆ ಕೇಳರಳದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮೋದಿ ತಮ್ಮ ಮನ್ ಕೀ ಬಾತ್ನಲ್ಲಿ ರಾಜಪ್ಪರ ಉದಾಹರಣೆ ನೀಡಿ ನಾವೆಲ್ಲರೂ ಇಂತಹ ಜವಾಬ್ದಾರಿ ಹೊಂದಬೇಕು, ನಮ್ಮ ಸುತ್ತಲಿನ ಪರಿಸರವನ್ನು ಸಮಯ ಸಿಕ್ಕಾಗಲೆಲ್ಲಾ ಸ್ವಚ್ಛವಾಗಿರಿಸಬೇಕು ಎಂದಿದ್ದರು.
ರಾಜಪ್ಪ 5 ವರ್ಷದವರಾಗಿದ್ದಾಗಿನಿಂದಲೂ ಪೋಲಿಯೋದಿಂದ ಬಳಲುತ್ತಿದ್ದಾರೆ. ಆದರೆ ಅವರಿಗೆ ಈ ಕೊರತೆ ಕಾಡದೆ ಯಾರ ಮೇಲೂ ಅವಲಂಬಿಸದೆ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ. 2018ರಲ್ಲಿ ಉಂಟಾದ ಪ್ರವಾಹದಲ್ಲಿ ರಾಜಪ್ಪ ತಮ್ಮ ಮನೆ ಕಳೆದುಕೊಂಡರು. ಬಳಿಕ ವೆಂಬನಾಡ್ ಕೆರೆ ಬಳಿಯ ಅವರ ಸಹೋದರಿಯ ಮನೆಗೆ ಶಿಫ್ಟ್ ಆಗಿದ್ದರು. ಆದರೆ ಪ್ರವಾಸಿಗರಿಂದ ತುಂಬಿರುತ್ತಿದ್ದ ವೆಂಬನಾಡ್ ಕೆರೆಯು ಪ್ಲಾಸ್ಟಿಕ್ ವೇಸ್ಟ್ನಿಂದ ಮಾಲಿನ್ಯವಾಗಿತ್ತು.
ಈ ಹಿನ್ನೆಲೆ ರಾಜಪ್ಪ ಸಣ್ಣ ದೋಣಿ ಬಾಡಿಗೆಗೆ ಪಡೆದು ಅದರ ಸಹಾಯದಿಂದ ಪ್ರತಿದಿನ ಅಲ್ಲಿನ ಕಸವನ್ನು ಮುಕ್ತ ಮಾಡಲು ಆರಂಭಿಸಿದರು. ಈ ಕುರಿತು ಮಾತನಾಡಿದ ರಾಜಪ್ಪ, ಬೆಳಗ್ಗೆಯೆ ಎದ್ದು, ಕೆರೆಯಲ್ಲಿನ ಪ್ಲಾಸ್ಟಿಕ್ ಆರಿಸಲು ಮುಂದಾಗುತ್ತಿದ್ದೆ. ನನಗೆ ಸ್ವಂತ ಬೋಟ್ ಹಾಗೂ ಮನೆ ಮಾಡಬೇಕೆಂಬ ಆಸೆ ಇದೆ ಎಂದಿದ್ದರು. ಇದೀಗ ರಾಜಪ್ಪನಿಗೆ ಸಹಾಯ ಮಾಡಲು ದುಬೈ ಮೂಲದ ವ್ಯಕ್ತಿಯೋರ್ವರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಅವರ ಕಾರ್ಯ ಮೆಚ್ಚಿ ಅವರಿಗೇನಾದರೂ ನೀಡಬೇಕು ಎಂದಿದ್ದಾರೆ ಅಂತ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ:ಇಂಡೋ - ಬಾಂಗ್ಲಾ ಗಡಿಯಲ್ಲಿ ಬಿಎಸ್ಎಫ್ ಗುಂಡಿಗೆ ಬಲಿಯಾದ್ನಾ ಯುವಕ ? : ಸ್ಥಳದಲ್ಲಿ ಬಿಗುವಿನ ವಾತಾವರಣ