ನವದೆಹಲಿ: ಪ್ರಜಾಪ್ರಭುತ್ವವನ್ನು ಬೆಂಬಲಿಸಿದವರ ಮೇಲೆ ದೌರ್ಜನ್ಯ ಎಸಗಿದ ತುರ್ತು ಪರಿಸ್ಥಿತಿಯ ಅವಧಿಯು ದೇಶದ ಇತಿಹಾಸದಲ್ಲಿ ಕರಾಳ ಯುಗ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದ್ದು ಅದು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂವಿಧಾನವನ್ನು ಅತ್ಯುನ್ನತ ಸ್ಥಾನದಲ್ಲಿ ಇಟ್ಟಿದೆ. ಹೀಗಾಗಿ ನಮ್ಮ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಜೂನ್ 25ರ ದಿನಾಂಕವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು.
ಇಂದು ತಮ್ಮ ಮನ್ ಕಿ ಬಾತ್ ರೇಡಿಯೋ ಪ್ರಸಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನೈಸರ್ಗಿಕ ವಿಕೋಪಗಳನ್ನು ಎದುರಿಸುವಲ್ಲಿ ಭಾರತದ ಸಾಮರ್ಥ್ಯ ಹೆಚ್ಚಾಗಿರುವುದನ್ನು ಶ್ಲಾಘಿಸಿದರು. ಬಿಪರ್‌ಜೋಯ್ ಚಂಡಮಾರುತದಿಂದ ಉಂಟಾದ ವಿನಾಶದಿಂದ ಕಛ್ನ ಜನತೆ ಶೀಘ್ರವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎರಡು ದಶಕಗಳ ಹಿಂದೆ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ ಕಛ್ನ ಜನರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆಯೇ ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಕಛ್ನ ಜನ ಆ ದುರಂತದಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕಳೆದ ಕೆಲ ವರ್ಷಗಳಲ್ಲಿ ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯ ಹೆಚ್ಚಿದೆ ಮತ್ತು ಅದಕ್ಕೆ ಸಾಕಷ್ಟು ಉದಾಹರಣೆಗಳು ಕಾಣಿಸುತ್ತಿವೆ ಎಂದು ಮೋದಿ ಹೇಳಿದರು. ಬಿಪರ್‌ಜೋಯ್ ಚಂಡಮಾರುತವು ಗುರುವಾರ ಸಂಜೆ ಜಖೌ ಬಳಿ ಅಪ್ಪಳಿಸಿದೆ ಮತ್ತು ಗುಜರಾತ್‌ನ ಕಛ್ ಮತ್ತು ಸೌರಾಷ್ಟ್ರ ಪ್ರದೇಶಗಳಲ್ಲಿ ವಿನಾಶವನ್ನುಂಟು ಮಾಡಿದೆ.