ನವದೆಹಲಿ:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಕಲಿ ರಾಷ್ಟ್ರೀಯತೆ ಮತ್ತು ವಿಭಜಕ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಎನ್ಡಿಎ ಸರ್ಕಾರ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿರುವ ಸಿಂಗ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜವಾಹರ್ಲಾಲ್ ನೆಹರೂ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಕ್ಕೆ ತಿರುಗೇಟು ನೀಡಿ, ಮೋದಿ ಅವರು ದೇಶದ ಇತಿಹಾಸ ದೂಷಿಸುವ ಬದಲು ತಮ್ಮ ಸ್ಥಾನದ ಘನತೆಯನ್ನು ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಎಂದಿಗೂ ಒಡೆದು ಆಳುವ ರಾಜಕಾರಣವನ್ನು ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ ಎಂದು ಹೇಳಿದ್ದಾರೆ.
ನಕಲಿ ರಾಷ್ಟ್ರೀಯತೆಯಿಂದ ವಿಘಟನೆ:ಕಾಂಗ್ರೆಸ್ ಎಂದಿಗೂ ದೇಶದ ಗೌರವ ಅಥವಾ ಪ್ರಧಾನಿ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಎನ್ಡಿಎ ಸರ್ಕಾರದ ನಕಲಿ ರಾಷ್ಟ್ರೀಯತೆ ದೇಶಕ್ಕೆ ಅಪಾಯಕಾರಿಯಾಗಿದೆ. ಇದರಿಂದ ಸಮಾಜ ವಿಘಟನೆ ಹೊಂದುತ್ತಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಸರ್ಕಾರ ಅನುಸರಿಸಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ, ವಿದೇಶಾಂಗ ನೀತಿಯಲ್ಲಿ ತಿಳಿವಳಿಕೆ ಹೊಂದಿಲ್ಲ. ಗಡಿಯಲ್ಲಿ ಚೀನಾ ಅತಿಕ್ರಮಣ, ದೌರ್ಜನ್ಯ ಹೆಚ್ಚುತ್ತಿದೆ. ಇದನ್ನು ಸರ್ಕಾರ ಮರೆಮಾಚಿದೆ. ಎಲ್ಎಸಿಯಲ್ಲಿ ನಡೆಯುವ ಘಟನೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ವಿದೇಶಾಂಗ ನೀತಿಯಲ್ಲೂ ಕೂಡ ಸಂಪೂರ್ಣ ಸೋಲು ಕಂಡಿದೆ. ಮಾಡಿದ 'ಪಾಪಗಳನ್ನು' ಮರೆಮಾಚಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.