ಚಂಡೀಗಢ (ಪಂಜಾಬ್):ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಿಗೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ ಬಳಿಕ ಇದೀಗ ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಮನೀಶ್ ತಿವಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ಯಾರೆ ಲಾಲ್ ಗರ್ಗ್ ಮತ್ತು ಮಲ್ವಿಂದರ್ ಮಾಲಿ ಎಂಬವರನ್ನು ನವಜೋತ್ ಸಿಧು ಅವರು ತಮ್ಮ ಸಲಹೆಗಾರರನ್ನಾಗಿ ಇತ್ತೀಚೆಗೆ ನೇಮಿಸಿದ್ದರು. ಕಳೆದ ವಾರ ಇವರಿಬ್ಬರು "ಕಾಶ್ಮೀರ ಒಂದು ಪ್ರತ್ಯೇಕ ರಾಷ್ಟ್ರ. ಭಾರತ ಮತ್ತು ಪಾಕಿಸ್ತಾನ ಇಲ್ಲಿ ಅಕ್ರಮ ವಲಸಿಗರು" ಎಂದು ಮಲ್ವಿಂದರ್ ಮಾಲಿ ಹಾಗೂ ಪಾಕಿಸ್ತಾನದ ಬಗ್ಗೆ ಪ್ಯಾರೆ ಲಾಲ್ ಗರ್ಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ನೀಡಿದ್ದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ಇದು ಸಂಪೂರ್ಣವಾಗಿ ದೇಶ ವಿರೋಧಿ ಹೇಳಿಕೆ. ಕಾಶ್ಮೀರವು ಭಾರತದ ಒಂದು ಅವಿಭಾಜ್ಯ ಅಂಗವಾಗಿದೆ. ಭಾರತದ ಹಿತಾಸಕ್ತಿಗಳಿಗೆ ಹೆಚ್ಚಿನ ಹಾನಿ ಮಾಡುವ ಮೊದಲು ತಮ್ಮ ಸಲಹೆಗಾರರನ್ನು ನಿಯಂತ್ರಿಸುವಂತೆ ನವಜೋತ್ ಸಿಂಗ್ ಸಿಧುಗೆ ಸೂಚಿಸಿದ್ದರು. ಅವರು ತಮ್ಮ ಹೇಳಿಕೆಗಳ ಪರಿಣಾಮಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿಲ್ಲದೇ, ಜ್ಞಾನವಿಲ್ಲದ ವಿಷಯಗಳ ಬಗ್ಗೆ ಮಾತನಾಡದಂತೆ ಸೂಚಿಸಿದ್ದರು.