ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಕರೆದೊಯ್ದಿದರು. ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಶೇಷ ಸಿಬಿಐ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರ ಮುಂದೆ ಸಿಸೋಡಿಯಾರನ್ನು ಹಾಜರುಪಡಿಸಿದ್ದಾರೆ. ನ್ಯಾಯಾಲಯ ಅವರನ್ನು ಏಪ್ರಿಲ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಏ. 5 ವರೆಗೆ ತಿಹಾರ್ ಜೈಲಿಗೆ ಸಿಸೋಡಿಯಾ:ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಮಾರ್ಚ್ 16 ರಂದು ಸಿಸೋಡಿಯಾ ಅವರನ್ನು ನ್ಯಾಯಾಲಯವು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಇದಕ್ಕೂ ಮುನ್ನ ಮಾರ್ಚ್ 10 ರಂದು ಅವರನ್ನು ಏಳು ದಿನಗಳ ಕಾಲ ಇಡಿ ರಿಮಾಂಡ್‌ಗೆ ಕಳುಹಿಸಲಾಗಿತ್ತು. ನಂತರ ಮಾರ್ಚ್ 9 ರಂದು ತಿಹಾರ್ ಜೈಲಿನಿಂದ ಸಿಸೋಡಿಯಾ ಅವರನ್ನು ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಬುಧವಾರ ನ್ಯಾಯಾಲಯವು ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದೆ. ಸಿಸೋಡಿಯಾ ಅವರನ್ನು ಏಪ್ರಿಲ್ 5 ವರೆಗೆ ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ.
ಮಾ. 25ಕ್ಕೆ ಮುಂದಿನ ವಿಚಾರಣೆ:ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದಲ್ಲಿ ಉತ್ತರವನ್ನು ಸಲ್ಲಿಸುವಂತೆ ಇಡಿಗೆ ನೋಟಿಸ್ ನೀಡಿದೆ. ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 25 ಕ್ಕೆ ನಿಗದಿಪಡಿಸಿದೆ. ಈ ವೇಳೆ ಸಿಸೋಡಿಯಾ ಪರ ಹಾಜರಾದ ಹಿರಿಯ ವಕೀಲ ದಯಾ ಕೃಷ್ಣನ್ ಜಾಮೀನು ನೀಡುವಂತೆ ಕೋರಿದರು.