ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಮತ್ತು ಪದವಿ ಪ್ರಮಾಣಪತ್ರಗಳ ಕುರಿತು ಆಮ್ ಆದ್ಮಿ ಪಕ್ಷ ತನ್ನ ವಾಗ್ದಾಳಿ ಮುಂದುವರೆಸಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಲವು ಬಾರಿ ಪ್ರಧಾನಿ ಮೋದಿಯನ್ನು ಅನಕ್ಷರಸ್ಥ ಎಂದು ಕರೆದು ನೇರವಾಗಿ ಟೀಕಾ ಪ್ರಹಾರ ಮಾಡಿದ್ದಾರೆ. ಇದೀಗ ಮಾಜಿ ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಜೈಲಿನಿಂದಲೇ ಮೋದಿ ಶಿಕ್ಷಣ ಬಗ್ಗೆ ಪತ್ರ ಬರೆದಿದ್ದಾರೆ.
ದೆಹಲಿಯ ನೂತನ ಮದ್ಯ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಅಲ್ಲಿಂದಲೇ ಪ್ರಧಾನಿ ಶೈಕ್ಷಣಿಕ ಅರ್ಹತೆ ಕುರಿತು ಬಹಿರಂಗ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಶುಕ್ರವಾರ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೋದಿಜಿಗೆ ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ. ಭಾರತದ ಪ್ರಗತಿಗೆ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ ಎಂದು ಸಿಸೋಡಿಯಾ ಕುಟುಕಿದ್ದಾರೆ.
60 ಸಾವಿರ ಸರ್ಕಾರಿ ಶಾಲೆಗಳು ಬಂದ್- ಸಿಸೋಡಿಯಾ:ಪ್ರಧಾನಿ ಮೋದಿ ವಿದ್ಯಾರ್ಹತೆ ಜೊತೆಗೆ ದೆಹಲಿಯ ಮಾಜಿ ಡಿಸಿಎಂ, ಹಲವು ಪ್ರಶ್ನೆಗಳನ್ನೂ ಎತ್ತಿದ್ದಾರೆ. ''ಮನೀಶ್ ಸಿಸೋಡಿಯಾ ಜೈಲಿನಿಂದ ದೇಶಕ್ಕೆ ಪತ್ರ ಬರೆದಿದ್ದಾರೆ. ಪ್ರಧಾನಿ ಕಡಿಮೆ ಶಿಕ್ಷಣ ಪಡೆದಿರುವುದು ದೇಶಕ್ಕೆ ತುಂಬಾ ಅಪಾಯಕಾರಿ. ಮೋದಿಗೆ ವಿಜ್ಞಾನ ಮತ್ತು ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಲ್ಲಿ 60,000 ಶಾಲೆಗಳನ್ನು ಮುಚ್ಚಲಾಗಿದೆ'' ಎಂದು ಸಿಸೋಡಿಯಾ ಬರೆದ ಪತ್ರವನ್ನು ಹಂಚಿಕೊಂಡಿರುವ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಸಿಸೋಡಿಯಾ ಪತ್ರದ ಸಾರಾಂಶ... ಇಂದು ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ಇಡೀ ಜಗತ್ತು ಕೃತಕ ಬುದ್ಧಿಮತ್ತೆ (AI-Artificial Intelligence) ಬಗ್ಗೆ ಮಾತನಾಡುತ್ತಿದೆ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಿತ್ಯ ಪ್ರಪಂಚದಾದ್ಯಂತ ನಡೆಯುತ್ತಿವೆ. ಆದರೆ, ಮೋಡಗಳ ಹಿಂದೆ ಹಾರುವ ವಿಮಾನವನ್ನು ರಾಡಾರ್ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿ ಪ್ರಧಾನಿ, ಇಡೀ ವಿಶ್ವದ ಜನರ ಮುಂದೆ ನಗೆಪಾಟಲಿಗೀಡಾಗಿದ್ದರು. ಶಾಲಾ, ಕಾಲೇಜಿನಲ್ಲಿ ಓದುವ ಮಕ್ಕಳು ಕೂಡ ಅವರನ್ನೂ ಗೇಲಿ ಮಾಡುತ್ತಿದ್ದಾರೆ ಎಂದು ಸಿಸೋಡಿಯಾ ಪತ್ರದ ಮೂಲಕ ಕಿಡಿಕಾರಿದ್ದಾರೆ.