ನವದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ) ನಲ್ಲಿ 6000 ಕೋಟಿ ರೂಪಾಯಿ ಟೋಲ್ ತೆರಿಗೆ ಹಗರಣ ನಡೆದಿದ್ದು,ಈ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರತಿದಿನ ದಿನ ದೆಹಲಿಗೆ ಬರುತ್ತಿದ್ದ ಸುಮಾರು 10 ಲಕ್ಷ ವಾಣಿಜ್ಯ ವಾಹನಗಳಿಂದ ಟೋಲ್ ಟ್ಯಾಕ್ಸ್ ಪಡೆಯಲಾಗಿದ್ದ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸಿಸೋಡಿಯಾ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಪತ್ರದಲ್ಲಿ ಬರೆದಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಪಕ್ಷ ಆಡಳಿತದಲ್ಲಿರುವಾಗ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಟೋಲ್ ತರಿಗೆ ಕಂಪನಿಯೊಂದಿಗೆ ಶಾಮೀಲಾಗಿ ಸುಮಾರು 6000 ಕೋಟಿ ಹಗರಣ ಮಾಡಿದೆ. ಇದಾದ ಬಳಿಕ 2021 ರಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಶಹಕರ್ ಗ್ಲೋಬಲ್ ಲಿಮಿಟೆಡ್ ಎಂಬ ಕಂಪನಿಗೆ 786 ಕೋಟಿಗಳಿಗೆ ಗುತ್ತಿಗೆ ನೀಡಿತ್ತು. ಆದರೆ, ಆ ಕಂಪನಿ ಎಂಸಿಡಿಗೆ ಕೇವಲ 250 ಕೋಟಿಗಳನ್ನು ಮಾತ್ರ ನೀಡುತ್ತಿದೆ ಎಂದು ಸಿಸೋಡಿಯಾ ಬಿಜೆಪಿ ವಿರುದ್ದ ಆರೋಪಿಸಿದ್ದಾರೆ.
ಒಂದು ವೇಳೆ, ಈ ಕುರಿತು ಪ್ರಾಮಾಣಿಕ ತನಿಖೆಯಾದರೆ ಬಿಜೆಪಿಯ ದೊಡ್ಡ ನಾಯಕರು ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು. ಮಂಗಳವಾರ, ಆಮ್ ಆದ್ಮಿ ಪಕ್ಷದ ಶಾಸಕ ಮತ್ತು ಎಂಸಿಡಿ ಉಸ್ತುವಾರಿ ದುರ್ಗೇಶ್ ಪಾಠಕ್ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸ ಕಂಪನಿಯೂ ಪೂರ್ತಿ ಹಣ ನೀಡದೆ ಸುಮಾರು 250 ಕೋಟಿ ಮಾತ್ರ ನೀಡುತ್ತಿರುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ದಾರೆ. ಇನ್ನು ಇದನ್ನು ಎಂಸಿಡಿ ಆಧಾರರಹಿತ ಆರೋಪ ಎಂದು ತಳ್ಳಿಹಾಕಿದೆ.
ಇದನ್ನೂ ಓದಿ:ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ನೇಮಕ