ನವದೆಹಲಿ:ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ರಸ್ತೆ ಮೇಲೆ ಅವರನ್ನು ಮೆರವಣಿಗೆ ಮಾಡಿಸಿದ ಅಮಾನುಷ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಕೀಚಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆಯನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ.
ಎರಡೂವರೆ ತಿಂಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಉದ್ರಿಕ್ತ ಗುಂಪು ಅಮಾನುಷವಾಗಿ ನಡೆದುಕೊಂಡಿದೆ. ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರಿಗೆ ಸೂಚನೆ ನೀಡಿದ್ದು, ತನಿಖೆ ಆರಂಭಿಸಲಾಗಿದೆ. ಈಗಾಗಲೇ ಓರ್ವನನ್ನು ಬಂಧಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ತೌಬಲ್ ಜಿಲ್ಲೆಯಲ್ಲಿ ಅಪರಿಚಿತ ಸಶಸ್ತ್ರಧಾರಿ ದುಷ್ಕರ್ಮಿಗಳ ಗುಂಪು ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಅಪಹರಿಸಿ ಬೆತ್ತಲೆಗೊಳಿಸಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮಹಿಳೆಯರು ತಮ್ಮನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. ಕೋಪ್ರೋದ್ರಿಕ್ತ ಗುಂಪು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ವಿಡಿಯೋದಲ್ಲಿದೆ. ನೋಂಗ್‌ಪೋಕ್ ಸೆಕ್ಮೈ ಪೊಲೀಸರು ಅಪಹರಣ, ಸಾಮೂಹಿಕ ಅತ್ಯಾಚಾರ, ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಎಂ ಟ್ವೀಟ್:ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ ಸಿಎಂ ಎನ್ ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದು, ವೈರಲ್ ಆಗಿರುವ ಮಹಿಳೆಯರ ವಿಡಿಯೋ ಕಂಡು ಆಘಾತವಾಗಿದೆ. ಅಮಾನವೀಯ ಕೃತ್ಯಕ್ಕೆ ಒಳಗಾದ ಅವರ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಓರ್ವನನ್ನು ಈಗಾಗಲೇ ಬಂಧಿಸಲಾಗಿದೆ. ಸೂಕ್ತ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಮರಣದಂಡನೆ ಸೇರಿದಂತೆ ಕಠಿಣ ಕ್ರಮ ಆಗುವಂತೆ ನೋಡಿಕೊಳ್ಳಲಾಗುವುದು. ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ:ಮಣಿಪುರ ಘಟನೆಗೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು. ಸಿಎಂ ಎನ್ ಬಿರೇನ್ ಸಿಂಗ್ ಅವರು ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಓರ್ವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಸಂಜೆ ವೇಳೆಗೆ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಟ್ವಿಟರ್ನಿಂದ ಈ ವಿಡಿಯೋವನ್ನು ಡಿಲಿಟ್ ಮಾಡುವಂತೆ ಸಂಸ್ಥೆಗೆ ನೋಟಿಸ್ ನೀಡಿದ್ದೇವೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಮಣಿಪುರ ಜೊತೆಗೆ ರಾಜಸ್ಥಾನ, ಛತ್ತೀಸ್ಗಢದಲ್ಲೂ ಇಂತಹ ಘಟನೆಗಳು ನಡೆದಿವೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಮಹಿಳಾ ರೇಖಾ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ:ಮಣಿಪುರ ಮಹಿಳೆಯರ ಮೇಲಿನ ದುಷ್ಕೃತ್ಯ ಅಮಾನವೀಯ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ಮೋದಿ