ನವದೆಹಲಿ:ತೀವ್ರಜನಾಂಗೀಯ ಕಲಹಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಸಂತ್ರಸ್ತರಿಗೆ ನೀಡಲಾಗಿರುವ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗೆ ರಚಿಸಲಾದ ಮೂವರು ಹೈಕೋರ್ಟ್ ಮಾಜಿ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ಪರಿಶೀಲನೆ ಬಳಿಕ ಈ ಕುರಿತ ಆದೇಶವನ್ನು ಆಗಸ್ಟ್ 25 ರಂದು ನೀಡುವುದಾಗಿ ಸುಪ್ರೀಂ ಕೋರ್ಟ್ ಇಂದು (ಸೋಮವಾರ) ತಿಳಿಸಿದೆ.
ಮೂವರು ಮಾಜಿ ಜಡ್ಜ್ಗಳ ಸಮಿತಿಯು ಪ್ರತ್ಯೇಕವಾಗಿ ಮೂರು ವರದಿಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪೀಠಕ್ಕೆ ಸಲ್ಲಿಸಿದೆ. ಹಿಂಸಾಚಾರಪೀಡಿತ ಮಣಿಪುರದಲ್ಲಿ ಜನರಿಗೆ ನೀಡಲಾಗಿರುವ ಪುನರ್ವಸತಿ, ಪರಿಹಾರ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ಕುರಿತು ಸಮಿತಿ ಪರಿಶೀಲನೆ ನಡೆಸಿದ ವರದಿ ಸಿದ್ಧಪಡಿಸಿದೆ.
ವರದಿ ಸ್ವೀಕರಿಸಿರುವ ಸುಪ್ರೀಂ, ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ರಚಿಸಲಾದ ಸಮಿತಿಯ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಆದೇಶಗಳನ್ನು ಶುಕ್ರವಾರ ನೀಡಲಾಗುವುದು. ಆಡಳಿತಾತ್ಮಕ ನೆರವು, ಅಗತ್ಯವಿರುವ ಹಣಕಾಸಿನ ವೆಚ್ಚ ಸೇರಿದಂತೆ ಅದರ ಕಾರ್ಯವಿಧಾನದ ಮೇಲೆ ನಿರ್ದೇಶನಗಳನ್ನು ನೀಡಬೇಕಾಗಿದೆ. ಸಮಿತಿಯು ಸಲ್ಲಿಸಿರುವ ಮೂರು ಪ್ರತ್ಯೇಕ ವರದಿಗಳನ್ನು ಪ್ರಕರಣದ ಹೊಣೆ ಹೊತ್ತಿರುವ ವಕೀಲರಿಗೆ ನೀಡಲಾಗುವುದು ಎಂದು ಹೇಳಿದೆ.
ವರದಿಯಲ್ಲೇನಿದೆ?:ತ್ರಿಸದಸ್ಯ ಜಡ್ಜ್ಗಳು ಸಲ್ಲಿಸಿರುವ ವರದಿಯಲ್ಲಿ, ಮುಖ್ಯವಾಗಿ ಹಿಂಸಾಚಾರಕ್ಕೀಡಾದ ಸಂತ್ರಸ್ತರು ತಮ್ಮ ಅಗತ್ಯ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಅವುಗಳನ್ನು ಮರುಹಂಚಿಕೆ ಮಾಡಬೇಕಾಗಿದೆ. ಸಂತ್ರಸ್ತರಿಗೆ ನೀಡಲಾಗಿರುವ ಪರಿಹಾರ ಯೋಜನೆಯನ್ನು ಮತ್ತೆ ನವೀಕರಿಸಬೇಕು. ಅನಾಹುತಗಳ ಬಗ್ಗೆ ಅಧ್ಯಯನಕ್ಕಾಗಿ ಸ್ಥಳೀಯ ತಜ್ಞರ ಸಮಿತಿಯ ನೇಮಕಾತಿ ಮಾಡಬೇಕು ಎಂಬುದನ್ನು ಒತ್ತಿಹೇಳಿದೆ.