ಇಂಫಾಲ್ ( ಮಣಿಪುರ) :ಪರಿಶಿಷ್ಟ ಪಂಗಡದ ಮೀಸಲಾತಿ ಸ್ಥಾನಮಾನ ವಿಚಾರವಾಗಿ ಮಣಿಪುರದಲ್ಲಿ ಬುಡಕಟ್ಟು ಮತ್ತು ಬಹುಸಂಖ್ಯಾತ ಮೈಟೀಸ್ ಸಮುದಾಯದ ನಡುವೆ ಉಂಟಾದ ಸಂಘರ್ಷ ಹಿಂಸಾಚಾರಕ್ಕೆ ತಿರುಗಿತ್ತು. ಇದೀಗ ಮೊರೆಹ್ ಮತ್ತು ಕಾಂಗ್‌ಪೋಕ್ಪಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇಂಫಾಲ್ ಮತ್ತು ಚುರಾಚಂದ್‌ಪುರ ಪ್ರದೇಶದಲ್ಲಿಯೂ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ. ಚುರಾಚಂದ್‌ಪುರ ಸೇರಿದಂತೆ ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಯುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
"ಮೊರೆಹ್ ಮತ್ತು ಕಾಂಗ್‌ಪೋಕ್ಪಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಂಫಾಲ್ ಮತ್ತು ಚುರಾಚಂದ್‌ಪುರದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನ ನಡೆಯುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪುರದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಭಾರತೀಯ ವಾಯುಪಡೆಯು ಅಸ್ಸಾಂನ ಎರಡು ಏರ್‌ಫೀಲ್ಡ್‌ಗಳಿಂದ C17 ಗ್ಲೋಬ್ ಮಾಸ್ಟರ್ ಮತ್ತು AN 32 ವಿಮಾನಗಳನ್ನು ಬಳಸಿಕೊಳ್ಳುವ ಮೂಲಕ ನಿರಂತರ ಹಾರಾಟ ಕಾರ್ಯಚರಣೆ ಕೈಗೊಂಡಿದೆ. ಸಂಘರ್ಷ ಪ್ರದೇಶಗಳಿಂದ ಎಲ್ಲ ಸಮುದಾಯಗಳ ನಾಗರಿಕರ ಸ್ಥಳಾಂತರಿಸುವಿಕೆಯು ರಾತ್ರಿಯಿಡೀ ಮುಂದುವರೆಯಿತು ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅರುಣಾಚಲ ಪ್ರದೇಶ ಸರ್ಕಾರವು ಸಮನ್ವಯ ಸಮಿತಿಯನ್ನು ರಚಿಸಿದೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ಮಣಿಪುರದಲ್ಲಿ ಸೇನೆ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.