ಇಂಫಾಲ್:ಮಣಿಪುರದ ಕೆಲವು ಭಾಗಗಳಲ್ಲಿ ಈ ಹಿಂದೆ ಘರ್ಷಣೆ ಉಂಟಾಗಿತ್ತು. ಸದ್ಯ ಮೋರೆ ಮತ್ತು ಕಾಂಗ್‌ಪೋಕ್ಪಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಹಾಗೂ ಈ ಭಾಗದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಜೊತೆಗೆ ಇಂಫಾಲ್ ಮತ್ತು ಚುರಾಚಂದ್‌ಪುರ ಪ್ರದೇಶ ಸಹಜ ಸ್ಥಿತಿಗೆ ತರಲು ಎಲ್ಲಾ ಪ್ರಯತ್ನಗಳು ನಡೆಸಲಾಗುತ್ತದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಮಣಿಪುರದಲ್ಲಿ ಮುನ್ನೆಚ್ಚರಿಕೆ ಕ್ರಮ:"ಮಣಿಪುರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪಡೆಗಳ ರಚನೆ ಮುಂದುವರೆದಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಾಗಾಲ್ಯಾಂಡ್‌ನಿಂದ ಮರು ನಿಯೋಜಿಸಲಾಗಿದೆ'' ಎಂದು ಭಾರತೀಯ ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ, ಗುವಾಹಟಿ ಮತ್ತು ತೇಜ್‌ಪುರದಿಂದ ಇಂದು ರಾತ್ರಿ ಪ್ರಾರಂಭವಾಗುವ ಹೆಚ್ಚುವರಿ ಭಾರತೀಯ ಸೇನಾ ಸಿಬಂದಿಯನ್ನು ಸೇರಿಸಲು ಭಾರತೀಯ ವಾಯುಪಡೆಯು ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಮಣಿಪುರದಲ್ಲಿ ಸೇನೆ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಮೇ 3 ರಂದು ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ಎಟಿಎಸ್‌ಯು) ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮವಹಿಸಲಾಯಿತು.
ಸಿಎಂ ಕಾನ್ರಾಡ್ ಸಂಗ್ಮಾ ಹೇಳಿದ್ದೇನು?:ಇದಕ್ಕೂ ಮುನ್ನ ಗುರುವಾರ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಮಣಿಪುರದಲ್ಲಿ ಹಿಂಸಾಚಾರದ ವರದಿಗಳ ನಂತರ ಮೇಘಾಲಯದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸಭೆಯನ್ನು ಕರೆದರು. ಹಿರಿಯ ಸರ್ಕಾರಿ ಅಧಿಕಾರಿಗಳು ಹಾಜರಿದ್ದ ಸಭೆಯಲ್ಲಿ, ಎಲ್ಲಾ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಸಿಎಂ ಸೂಚನೆ ನೀಡಿದರು. ತೀವ್ರ ಪರಿಸ್ಥಿತಿ ಎದುರಾದರೆ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೇಘಾಲಯದ 200ಕ್ಕೂ ಹೆಚ್ಚು ನಿವಾಸಿಗಳು ಮಣಿಪುರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ತಲುಪಲು ವಿದ್ಯಾರ್ಥಿಗಳು ಅಥವಾ ಕುಟುಂಬ ಸದಸ್ಯರಿಗೆ ಸರ್ಕಾರ ಸಹಾಯವಾಣಿ ತೆರೆಯಲಾಗುತ್ತದೆ ಎಂದು ಸಂಗ್ಮಾ ಹೇಳಿದರು.