ಇಂಫಾಲ (ಮಣಿಪುರ):ಇಲ್ಲಿನ 2 ಸಮುದಾಯಗಳ ಮಧ್ಯೆ ನಡೆಯುತ್ತಿರುವ ಹಿಂಸಾಚಾರ ನಿಲ್ಲುವ ಲಕ್ಷಣಗಳೇ ಇಲ್ಲವಾಗಿದ್ದು, ರಕ್ತಚರಿತ್ರೆ ಮುಂದುವರಿದಿದೆ. ಶುಕ್ರವಾರ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್, ಯುವಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸ್ ಭದ್ರತೆ ನೀಡಿದಾಗ್ಯೂ ಬಿಷ್ಣುಪುರ್ ಜಿಲ್ಲೆಯ ಕಾಂಗ್ವೈ ಪ್ರದೇಶದಲ್ಲಿ ಕಾದಾಟ ನಡೆದಿದೆ.
ಶುಕ್ರವಾರ ರಾತ್ರಿ ದಾಳಿಗೆ ಮುಂದಾದ ಗುಂಪೊಂದು ಕಾಂಗ್ವೈ, ಸಾಂಗ್ಡೊ ಮತ್ತು ಅವಾಂಗ್ ಲೆಖೈ ಗ್ರಾಮಗಳ ಮನೆಗಳಿಗೆ ಬೆಂಕಿ ಹಚ್ಚಲು ಮುಂದಾಯಿತು. ಗುಂಪನ್ನು ಹಿಮ್ಮೆಟ್ಟಲು ಇನ್ನೊಂದು ಸಮುದಾಯದ ಜನರು ಪ್ರಯತ್ನ ನಡೆಸಿದರು. ಅಲ್ಲದೇ, ಬೆಂಕಿ ಹಚ್ಚದಂತೆ ಮನವಿ ಮಾಡಿದರು. ಇದನ್ನು ಲೆಕ್ಕಿಸದೇ ದಾಳಿಗೆ ಮುಂದಾದಾಗ, ಭದ್ರತಾ ಪಡೆಗಳು ಸೇರಿ ಜನರು ಗುಂಪಿನ ಮೇಲೆ ದಾಳಿ ನಡೆಸಿದರು. ಪರಸ್ಪರ ಗುಂಡಿನ ಚಕಮಕಿ ನಡೆದಿದೆ.
ಗುಂಡಿನ ಚಕಮಕಿಯಲ್ಲಿ ಪೊಲೀಸ್ ಕಮಾಂಡೋ ತೀವ್ರವಾಗಿ ಗಾಯಗೊಂಡು ಮೃತಪಟ್ಟರೆ, ಇನ್ನೂ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸದ್ಯ ಗುಂಡಿನ ಚಕಮಕಿ ನಿಂತಿದ್ದರೂ, ಕಣಿವೆಯ ಭಾಗದ ಗ್ರಾಮಗಳಲ್ಲಿ ಗುಂಪು ಘರ್ಷಣೆಯ ಮೇಲೆ ಭದ್ರತಾ ಪಡೆಗಳು ನಿಗಾ ಇಟ್ಟಿವೆ.
ಸಂಘರ್ಷ ನಡೆಸುತ್ತಿರುವ ಎರಡೂ ಸಮುದಾಯಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಹಿರಿಯ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದಾಗ್ಯೂ, ಉದ್ವಿಗ್ನ ಪರಿಸ್ಥಿತಿಗಳು ಹೆಚ್ಚಾಗುತ್ತಲೇ ಇವೆ. ಹಗಲು, ರಾತ್ರಿಯೆನ್ನದೇ ಗುಂಡಿನ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಇಲ್ಲಿಯವರೆಗೂ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆದ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಬಳಿಕ ಹಿಂಸಾಚಾರ ಭುಗಿಲೆದ್ದಿದೆ.
ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಮಣಿಪುರ ಪೊಲೀಸರಲ್ಲದೆ ಸುಮಾರು 40,000 ಕೇಂದ್ರ ಭದ್ರತಾ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ. ಮಣಿಪುರದ ಜನಸಂಖ್ಯೆಯ ಶೇಕಡಾ 53 ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ರಾಜ್ಯದ ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ ಮತ್ತು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇಬ್ಬರ ಮಧ್ಯೆ ಕಾದಾಟ ನಡೆಯುತ್ತಿದೆ.
ಇದನ್ನೂ ಓದಿ:ಮದ್ಯ ಹಗರಣ: ಮನೀಶ್ ಸಿಸೋಡಿಯಾ ಇತರರ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ