ತೇಜ್‌ಪುರ (ಅಸ್ಸೋಂ): ಮಣಿಪುರದಲ್ಲಿ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಭಾರತೀಯ ಸೇನೆ ನಿಯೋಜನೆ ಮುಂದುವರೆದಿದ್ದು, ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆ ತೀವ್ರಗೊಳಿಸಿದೆ. ಸೇನೆ ಮತ್ತು ಅಸ್ಸೋಂ ರೈಫಲ್ಸ್ ಇಂಫಾಲ್ ಕಣಿವೆಯ ಸುತ್ತಮುತ್ತಲಿನ ಎತ್ತರದ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಕೂಂಬಿಂಗ್ ಪ್ರಾರಂಭಿಸಿವೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದರು.
ಇಲ್ಲಿನ ಕಾಂಗ್ಚುಕ್, ಮೋಟ್‌ಬಂಗ್, ಸೈಕುಲ್, ಪುಖಾವೊ ಸಗೋಲ್ಮಾಂಗ್ ಪ್ರದೇಶಗಳಲ್ಲಿ ಇಂದು ಮುಂಜಾನೆಯಿಂದ ಸಶಸ್ತ್ರ ಬಂಡುಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಶುರು ಮಾಡಲಾಗಿದೆ. ಮಣಿಪುರ ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆ ಪುನಃಸ್ಥಾಪಿಸಲು ಸೇನೆ ಮತ್ತು ಅಸ್ಸೋಂ ರೈಫಲ್ಸ್ ಜಂಟಿಯಾಗಿ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಹೇಳಿದರು.
ಅರಣ್ಯದ ಪರ್ವತ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುವಾಗ ಸೇನಾ ಪಡೆಗಳು ಇತ್ತೀಚಿನ ತಂತ್ರಜ್ಞಾನ, ಉಪಕರಣಗಳು ಮತ್ತು ಫೋರ್ಸ್ ಮಲ್ಟಿಪ್ಲೈಯರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಕಳೆದ ರಾತ್ರಿ ಅವಿರತ ಕ್ರಮದ ಪರಿಣಾಮ ಚುರಾಚಂದ್‌ಪುರ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ತಲಾ ಒಂದು ಹಳ್ಳಿಯಲ್ಲಿ ಪ್ರಾಣಹಾನಿ ತಡೆಗಟ್ಟುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ರಾವತ್ ವಿವರಿಸಿದರು.
38 ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್: ಮತ್ತೊಂದೆಡೆ, ರಾಜ್ಯ ಸರ್ಕಾರವು 38 ನಿರ್ದಿಷ್ಟ ಸ್ಥಳಗಳಲ್ಲಿ ಪ್ಯಾರಾ ಮಿಲಿಟರಿ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ ಎಂದು ಶುಕ್ರವಾರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ತಿಳಿಸಿದ್ದರು. ಅಲ್ಲದೇ, ರಾಜ್ಯದ ಪರಿಸ್ಥಿತಿ ಕುರಿತ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬಿಜೆಪಿ ರಾಷ್ಟ್ರೀಯ ವಕ್ತಾರ, ಮಣಿಪುರದ ಉಸ್ತುವಾರಿ ಡಾ. ಸಂಬಿತ್ ಪಾತ್ರ ಅವರೊಂದಿಗೆ ಇಂಫಾಲ್‌ನ ರಾಜಭವನದಲ್ಲಿ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.