ಇಂಫಾಲ (ಮಣಿಪುರ) : ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಗಳ ತನಿಖೆಗಾಗಿ ಕೇಂದ್ರ ಸರ್ಕಾರವು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಹಿಂಸಾಚಾರದಿಂದ ವ್ಯಾಪಕ ಪ್ರಮಾಣದ ಜೀವಹಾನಿ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿತ್ತು. ರಾಜ್ಯಕ್ಕೆ ತಮ್ಮ ನಾಲ್ಕು ದಿನಗಳ ಭೇಟಿಯನ್ನು ಇಂದು ಮುಕ್ತಾಯಗೊಳಿಸಿದ ಶಾ, ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ವಿಶೇಷ ಕೇಂದ್ರ ತನಿಖಾ ದಳ (ಸಿಬಿಐ) ತಂಡವು ರಾಜ್ಯದಲ್ಲಿನ ಹಿಂಸಾಚಾರ ಪ್ರಕರಣಗಳ ತನಿಖೆ ನಡೆಸಲಿದೆ ಎಂದು ಹೇಳಿದರು.
ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರವು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶ್ರೇಣಿಯ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ಮಣಿಪುರದ ರಾಜ್ಯಪಾಲರು ನಾಗರಿಕ ಸಮಾಜದ ಸದಸ್ಯರೊಂದಿಗೆ ಶಾಂತಿ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಹಿಂಸಾಚಾರದ ಕಾರಣಗಳನ್ನು ಪರಿಶೀಲಿಸಲು ಮತ್ತು ಅದಕ್ಕೆ ಕಾರಣರಾದವರನ್ನು ಗುರುತಿಸಲು ತನಿಖಾ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಯಾವುದೇ ಪಕ್ಷಪಾತ ಮತ್ತು ತಾರತಮ್ಯವಿಲ್ಲದೆ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ಕೇಂದ್ರ ಸಚಿವರು ಮಣಿಪುರದ ಜನರಿಗೆ ಭರವಸೆ ನೀಡಿದರು. ಹಿಂಸಾತ್ಮಕ ಘಟನೆಗಳ ತನಿಖೆಗಾಗಿ ಮಣಿಪುರದಲ್ಲಿ ಹಲವಾರು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಪಿತೂರಿಯ ಸುಳಿವು ಇರುವ ಆರು ಹಿಂಸಾಚಾರದ ಘಟನೆಗಳ ಬಗ್ಗೆ ಉನ್ನತ ಮಟ್ಟದ ಸಿಬಿಐ ತನಿಖೆ ನಡೆಯಲಿದೆ. ತನಿಖೆಯು ನ್ಯಾಯಯುತವಾಗಿದೆ ನಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಾಳೆಯಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.